ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಸೇರಿದಂತೆ ಇತರ ಸಿಬ್ಬಂದಿ ಈಗಾಗಲೇ ತಿರುವನಂತಪುರಂಗೆ ತೆರಳಿದ್ದಾರೆ. ಆದರೆ, ಭಾರತ ಕ್ರಿಕೆಟ್ ತಂಡದ ಪ್ರಮುಖ ಕೋಚ್ ರಾಹುಲ್ ದ್ರಾವಿಡ್ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಹಾರಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ದ್ರಾವಿಡ್ ಅವರು ಕೋಲ್ಕತ್ತಾದಿಂದ ಬೆಂಗಳೂರಿಗೆ ಮುಂಜಾನೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಗುರುವಾರ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಅವರು ರಕ್ತದೊತ್ತಡದ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ಆ ಬಳಿಕ ಅವರನ್ನು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನ ವೈದ್ಯರು ಪರೀಕ್ಷಿಸಿದ್ದರು. ದ್ರಾವಿಡ್ ಆರೋಗ್ಯದ ಬಗ್ಗೆ ಚಿಂತಿಸಬೇಕಿಲ್ಲ. ಏಕೆಂದರೆ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಅಲ್ಲದೆ ಭಾನುವಾರದ ಪಂದ್ಯಕ್ಕೂ ಮುನ್ನ ಶನಿವಾರ ತಿರುವನಂತಪುರದಲ್ಲಿ ತಂಡವನ್ನು ಸೇರುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ದ್ರಾವಿಡ್ ಅವರು ಆರೋಗ್ಯವಂತರಾಗಿ ಬೆಂಗಳೂರಿಗೆ ವಿಮಾನ ಹತ್ತಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕಳೆದ ಜನವರಿ 11ರಂದು 50ನೇ ವರ್ಷಕ್ಕೆ ಕಾಲಿಟ್ಟ ಭಾರತದ ಮುಖ್ಯ ಕೋಚ್, ತಮ್ಮ ವೈದ್ಯರನ್ನು ಸಂಪರ್ಕಿಸಲು ಮತ್ತು ಕೆಲವು ಮುನ್ನೆಚ್ಚರಿಕೆಯ ಪರೀಕ್ಷೆಗಳಿಗೆ ಒಳಗಾಗಲು ಬೆಂಗಳೂರಿಗೆ ಹಾರಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಶ್ರೀಲಂಕಾ ಸರಣಿಯಲ್ಲಿ ಭಾರತ ಇದುವರೆಗೆ ಉತ್ತಮ ಫಾರ್ಮ್ನಲ್ಲಿದೆ. ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದ ಬಳಿಕ, ಆತಿಥೇಯರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಜೇಯ 2-0 ಮುನ್ನಡೆ ಸಾಧಿಸಿದ್ದಾರೆ. ಮೂರನೇ ಏಕದಿನ ಪಂದ್ಯವನ್ನು ಕೂಡಾ ಗೆದ್ದು, ಸರಣಿ ಕ್ಲೀನ್ ಸ್ವೀಪ್ ಸಾಧಿಸುವ ನಿರೀಕ್ಷೆಯಲ್ಲಿದೆ. ಒಟ್ಟಿನಲ್ಲಿ ರಾಹುಲ್ ದ್ರಾವಿಡ್ ಪುನ: ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
