ಉಳ್ಳಾಲ: ಸೋಮೇಶ್ವರ ಸಮುದ್ರಪಾಲಾದ ವಿದ್ಯಾರ್ಥಿಗಳ ಮೃತದೇಹ ಪತ್ತೆ

ಉಳ್ಳಾಲ, ಡಿ 10: ಸೋಮೇಶ್ವರದ ಅಲಿಮಕಲ್ಲು ಬಳಿ ಸಮುದ್ರ ಪಾಲಾದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಅದೇ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ನಿನ್ನೆ ಮುಳುಗಡೆಯಾದ ಸಂಜೆಯಿಂದ ಬೆಳಗ್ಗಿನವರೆಗೂ ಸ್ಥಳೀಯ ಈಜುಗಾರರು ನಿರಂತರ ಕಾರ್ಯಾಚರಣೆಯಲ್ಲಿದ್ದರು. ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಯಶ್ವಿತ್ (18) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ ಯುವರಾಜ್ (18) ಸಮುದ್ರ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

ಘಟನೆಯ ವಿವರ: ಸೋಮೇಶ್ವರ ಪರಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾದ ಯಶ್ವಿತ್, ಯುವರಾಜ ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಮದ್ಯಾಹ್ನ 12.40ಕ್ಕೆ ಕಾಲೇಜು ಮುಗಿಸಿ ಸೋಮೇಶ್ವರ ಶ್ರೀ ಸೊಮನಾಥ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆಯ ಬಳಿಕ ದೇವಸ್ಥಾನದಲ್ಲಿ ಊಟ ಮುಗಿಸಿ ಅಲ್ಲೇ ಪಕ್ಕದ ಮರದಡಿಯಲ್ಲಿ ಕುಳಿತಿದ್ದರು. ಸುಮಾರು ಮೂರು ಗಂಟೆಯ ಬಳಿಕ ಸ್ಥಳೀಯ ಗೂಡಂಗಡಿಯಿಂದ ತಿಂಡಿ ತೆಗೆದುಕೊಂಡು ಸೋಮೇಶ್ವರ ದೇವಸ್ಥಾನದಿಂದ ಉಚ್ಚಿಲದ ಕಡೆಗೆ ಸುಮಾರು ಒಂದು ಕಿ. ಮೀ.ಸಮುದ್ರದ ಬದಿಯಲ್ಲೇ ನಡೆದು ಕೊಂಡು ಹೋಗಿದ್ದು, ಸೋಮೇಶ್ವರ ಅಲಿಮಕಲ್ಲು ಬಳಿ ಸಮುದ್ರಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ನಾಲ್ವರು ಸಮುದ್ರ ಬದಿಯಲ್ಲಿ ಕುಳಿತಿದ್ದರೆ, ಯುವರಾಜ್ ಮತ್ತು ಯಶ್ವಿತ್ ಸಮುದ್ರದ ನೀರಿಗಿಳಿದು, ಕಲ್ಲಿನ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಸಮುದ್ರದ ಅಲೆಯೊಂದಕ್ಕೆ ಯುವರಾಜ್ ಜಾರಿ ಬಿದ್ದು ಸಮುದ್ರ ಪಾಲಾದಾಗ ಯಶ್ವಿತ್ ಆತನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗಿದ್ದಾರೆ.ರಕ್ಷಿಸಲು ಯತ್ನಿಸಿದ ಸಹಪಾಠಿಗಳು : ತಮ್ಮ ಇಬ್ಬರು ಸಹಪಾಠಿಗಳು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಕಂಡು ಅಲ್ಲೇ ಪಕ್ಕದ ಶೆಡ್‍ನಲ್ಲಿಟ್ಟಿದ್ದ ಟಯರ್ ಟ್ಯೂಬ್ ಬಳಸಿ ರಕ್ಷಣೆಗೆ ಯತ್ನಿಸಿದ್ದು, ರಕ್ಷಣೆ ಸಾಧ್ಯಾವಾಗದೆ ಇದ್ದಾಗ ಬೊಬ್ಬೆ ಹಾಕಿದ್ದಾರೆ. ಆ ಹೊತ್ತಿಗಾಗಲೇ ಇಬ್ಬರು ಸಮುದ್ರ ಪಾಲಾಗಿದ್ದು, ಸ್ಥಳೀಯ ಈಜುಗಾರರು ಆಗಮಿಸಿ ಸಮುದ್ರದಲ್ಲಿ ಹುಡುಕಾಟ ಆರಂಬಿಸಿದ್ದು, ರಾತ್ರಿವರೆಗೆ ಹುಡುಕಾಡಿದರೂ ಇಬ್ಬರು ಪತ್ತೆಯಾಗಿಲ್ಲ.

ಅಲಿಮಕಲ್ಲು ಪ್ರದೇಶ ಅಪಾಯಕಾರಿ : ಸೋಮೇಶ್ವರ ವ್ಯಾಪ್ತಿಯ ಸಮುದ್ರ ತೀರಕ್ಕೆ ಪ್ರವಾಸಿಗರು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಅ?ಕ ಸಂಖ್ಯೆಯಲ್ಲಿ ಆಗಮಿಸಿ ಅಲ್ಲೇ ಸಮುದ್ರದ ತೆರೆಗಳೊಂದಿಗೆ ಆಟವಾಡಿ ತೆರಳುವುದು ವಾಡಿಕೆ. ಈ ಪ್ರದೇಶದಲ್ಲಿ ಸ್ಥಳೀಯ ಜೀವರಕ್ಷಕ ಈಜುಗಾರರು ಮತ್ತು ತಟದಲ್ಲಿರುವ ಪೊಲೀಸ್, ಗೃಹರಕ್ಷಕ ಸಿಬ್ಬಂದಿಗಳು ಸಮುದ್ರಕ್ಕೆ ಇಳಿಯುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಿ ಅಪಾಯದ ಸೂಚನೆ ನೀಡುತ್ತಾರೆ. ಉಚ್ಚಿಲ ಭಾಗದಲ್ಲಿರುವ ಅಲಿಮಕಲ್ಲು ಪ್ರದೇಶಕ್ಕೆ ಸೋಮೇಶ್ವರ ರುದ್ರಪಾದೆಯಿಂದ ಒಂದು ಕಿ. ಮೀ. ಅಂತರವಿದೆ. ಈ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಿದ್ದು, ಜೀವರಕ್ಷಕ ಈಜುಗಾರರು ಸ್ಥಳದಲ್ಲಿರುವುದಿಲ್ಲ. ಸೋಮೇಶ್ವರದ ಸಮುದ್ರ ತೀರಕ್ಕೆ ಹೆಚ್ಚು ಬಾರಿ ಹೋಗುವವರೇ ಅಲಿಮಕಲ್ಲು ಪ್ರದೇಶಕ್ಕೆ ತೆರೆಳುತ್ತಾರೆ. ಆದರೆ ಈ ಪ್ರದೇಶದಲ್ಲಿ ಸಮುದ್ರದ ಉಬ್ಬರ ಮತ್ತು ಇಳಿತದ ಸಂದರ್ಭದಲ್ಲಿ ಸಮುದ್ರದ ಅಲೆಗಳು ಅಪಾಯಕಾರಿಯಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾಗಲು ಇದೇ ಕಾರಣ ಎಂದು ಸ್ಥಳೀಯ ಈಜುಗಾರರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ