ಬೆಂಗಳೂರು: ಕನ್ನಡ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ತನ್ನದೇ ಆದ ಹೊಸ ಹವಾ ಸೃಷ್ಟಿಸಿರುವ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾಕ್ಕೆ ಹೊಸ ಸಂಕಷ್ಟವೊಂದು ಬಂದೊದಗಿದೆ. ಆ ಚಿತ್ರದ ಸೂಪರ್ ಹಿಟ್ ಹಾಡಾಗಿರುವ ‘ವರಾಹ ರೂಪಂ’ ಹಾಡಿನ ಮೇಲೆ ಕೃತಿಚೌರ್ಯ ಆರೋಪದ ಕೇಸ್ ದಾಖಲಾಗುವ ನಿರೀಕ್ಷೆಯಿದೆ. ಈ ಕುರಿತು ಕೇರಳದ ನವರಸಂ ಆಲ್ಬಂನ ತೆಕ್ಕುಡಂ ಬ್ರಿಡ್ಜ್ ತಂಡದವರು ಕೇಸ್ ದಾಖಲಿಸುವುದಾಗಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಕಾಂತಾರ ಚಿತ್ರ ಬಿಡುಗಡೆಯಾದಗಿನಿಂದಲೇ ವರಾಹ ರೂಪಂ ಹಾಡಿಗೂ ತೈಕ್ಕುಡಂ ಬ್ರಿಡ್ಜ್‌ನ ನವರಸಂ ಆಲ್ಬಂನ ನಕಲು ಎಂದು ಸಾಕಷ್ಟು ಜನರು ಆರೋಪಿಸಿದ್ದರು. ಆ ಹಾಡಿಗೂ, ಈ ಹಾಡಿಗೂ ಸಾಕಷ್ಟು ಸಾಮ್ಯತೆ ಇರುವುದಾಗಿ ಬಹುತೇಕರು ಅಭಿಪ್ರಾಯಪಟ್ಟಿದ್ದರು. ಆದರೆ, ತಡವಾಗಿ ಪ್ರತಿಕ್ರಿಯೆ ನೀಡಿದ ಅಜನೀಶ್ “ಅದೇ ಬೇರೆ, ಇದೇ ಬೇರೆ” ಎಂದಿದ್ದಾರೆ. ಈ ಸಂದರ್ಭದಲ್ಲಿ ನವರಸಂ ತಂಡವು ಎರಡು ಹಾಡುಗಳ ನಡುವೆ “ನಿರಾಕರಿಸಲಾಗದ ಸಾಮ್ಯತೆʼʼ ಇರುವುದಾಗಿ ಹೇಳಿದೆ. ನಾವು ನಮ್ಮ ಸಂಗೀತ ಕೇಳುಗರಿಗೆ ತಿಳಿಸುವುದೇನೆಂದರೆ, ತೈಕ್ಕುಡಂ ಬ್ರಿಡ್ಜ್ ಮತ್ತು ಕಾಂತಾರ ನಡುವೆ ಯಾವುದೇ ಅಫಿಲಿಯೇಟೆಡ್ ವ್ಯವಹಾರ, ಒಪ್ಪಂದಗಳು ಇಲ್ಲ. ನಮ್ಮ ಐಪಿ “ನವರಸಂ ಮತ್ತು ವರಾಹ ರೂಪಂ ನಡುವೆ ನಿರಾಕರಿಸಲಾಗದ ಸಾಮ್ಯತೆ ಇದೆ. ಹೀಗಾಗಿ, ಇದು ಸ್ಪಷ್ಟ ಕಾಪಿರೈಟ್ ಉಲ್ಲಂಘನೆʼʼ ಎಂದು ತೈಕ್ಕುಡಂ ಬ್ರಿಡ್ಜ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ನಾವು ಆ ಹಾಡಿನ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದೇವೆ.


ಆ ಹಾಡಿನ ರಚನೆಗೆ ಕಾರಣರಾದ ಕ್ರಿಯೇಟಿವ್ ತಂಡದ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ” ಎಂದು ತೈಕ್ಕುಡಂ ಬ್ರಿಡ್ಜ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಎಲ್ಲಾ ಕೇಳುಗರು ನಮಗೆ ಈ ಕುರಿತು ಬೆಂಬಲ ನೀಡಬೇಕು ಮತ್ತು ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಬೇಕು ಎಂದು ನಾವು ವಿನಂತಿ ಮಾಡುತ್ತಿದ್ದೇವೆ. ಈ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ನಮ್ಮ ಸಹ ಸಂಗೀತರಾರರಲ್ಲಿ ವಿನಂತಿಸುತ್ತೇವೆʼʼ ಎಂದು ಪೋಸ್ಟ್ ಮಾಡಲಾಗಿದೆ. ಇದರ ಕುರಿತು ಪ್ರತಿಕ್ರಿಯಿಸಿದ ಅಜನೀಶ್ ನೀವು ಹೇಳುತ್ತಿರುವಂತೆ ನಾವು ಯಾವುದೇ ಟ್ಯೂನ್ ಅನ್ನು ಕದ್ದಿಲ್ಲ.

ಒಂದೇ ರೀತಿಯ ರಾಗಗಳನ್ನು ಮತ್ತು ಅಲ್ಲಿನ ಶೈಲಿಯನ್ನು ನಾವಿಲ್ಲಿ ಬಳಸಿಕೊಂಡಿದ್ದೇವೆ. ಆದರೆ, ಕಂಪೋಸಿಂಗ್ ಬೇರೆಯದೇ ಇದೆ. ಹಾಗಾಗಿ ಈ ಎರಡೂ ಹಾಡುಗಳು ಬೇರೆ ಬೇರೆ. ರೆಫರೆನ್ಸ್‌ಗೆ ಎಂದು ಒಮ್ಮೊಮ್ಮೆ ಹಾಡುಗಳನ್ನು ರಫ್ ಆಗಿ ಬಳಸಿರುತ್ತೇವೆ. ಆಗ ಟೆಂಪೋವನ್ನು ಚೆಕ್ ಮಾಡಿರುತ್ತೇವೆ. ಆದರೆ ನಾನು ಕಾಪಿ ಎಂಬುದನ್ನು ಒಪ್ಪುವುದಿಲ್ಲ” ಎಂದಿದ್ದಾರೆ ಅಜನೀಶ್. ರಾಕ್ ಮ್ಯೂಸಿಕ್ ಸ್ಟೈಲ್, ಟೆಂಪೋ, ರಾಗವನ್ನು ಬಳಸಲು ಆ ಹಾಡು ಸ್ಫೂರ್ತಿ ನೀಡಿದೆ. ಈ ಹಿಂದೆಯೂ “ನವರಸಂ” ಹಾಡನ್ನು ಕೇಳಿದ್ದೇನೆ. ಆ ಹಾಡು ನನಗೆ ಸ್ಫೂರ್ತಿ ನೀಡಿತ್ತು. ಎರಡು ಒಂದೇ ಥರ ಇದೆ ಎನಿಸಿದರೆ, ಅದಕ್ಕೆ ಕಾರಣ ಅದರ ರಾಗ. ತೋಡಿ, ವರಾಳಿ, ಮುಖಾರಿ ರಾಗಗಳನ್ನು ಮಿಕ್ಸ್ ಮಾಡಿ ಈ “ವರಾಹ ರೂಪಂ” ಹಾಡನ್ನು ಮಾಡಿದ್ದೇನೆ. ಸಂಗೀತ ಬಲ್ಲವರಿಗೆ ಇದನ್ನು ಕೇಳಿಸಿದರೆ ಆ ಹಾಡೇ ಬೇರೆ ಈ ಹಾಡೇ ಬೇರೆ ಎಂದು ಹೇಳುತ್ತಾರೆ” ಎಂದು ಅಜನೀಶ್ ತಮ್ಮ ಧಾಟಿಯಲ್ಲಿಯೇ ಕದ್ದದ್ದು ಎಂದವರಿಗೆ ಉತ್ತರ ನೀಡಿದ್ದಾರೆ.