ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಮೇಲೆ ಬಂದಿದ್ದರು. ಮಹಿಳೆ ಸಚಿವರ ಕಾಲಿಗೆ ನಮಸ್ಕಾರ ಮಾಡಲು ಹೋದಾಗ ವಿ ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.


ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಗೌರವ ನೀವು ಕೊಡೋದು ಹೀಗೇನಾ ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಘಟನೆ ಬಗ್ಗೆ ಮಾಧ್ಯಮಗಳ ಕನ್ನಡದ ಜೊತೆ ಮಾತನಾಡಿದ ವಿ ಸೋಮಣ್ಣ, ಕೋಪದಲ್ಲಿಯೇ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ನಾನು ಹೊಡೆದಿಲ್ಲ, ವಾಸ್ತವಾಂಶ ಬೇರೆ
ನಿನ್ನೆ 173 ಜನಕ್ಕೆ ನಿವೇಶನ ಹಂಚಿಕೆ ಮಾಡಲಾಯ್ತು. ಇನ್ನು 9-10 ಸೈಟ್ಗಳಿದ್ದು, ಸುಮಾರು 25 ಜನರು ಕೇಳುತ್ತಿದ್ದಾರೆ. ಈ ಮಹಿಳೆ ಐದಾರು ಬಾರಿ ಕಾಲಿಗೆ ನಮಸ್ಕಾರ ಮಾಡಿದರು. ನಾಲ್ಕೂವರೆ ಸಾವಿರ ರೂ. ಯಾರಿಗೋ ಕೊಟ್ಟಿದ್ದೀನಿ ಅಂದ್ರು. ಆ ವೇಳೆ ನಾನೇ ಹಣ ನೀಡಿದೆ. ನಾನು ಎಲ್ಲಾ ಹೆಣ್ಣು ಮಕ್ಕಳನ್ನು ಸೋದರಿಯ ಭಾವನೆಯಲ್ಲಿ ನೋಡುತ್ತೇನೆ. ಒಂದು ವೇಳೆ ಈ ಘಟನೆ ನಡೆದ್ರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕಾಲಿಗೆ ಬೀಳಲು ಬಂದಾಗ ತಡೆಯಲು ಹೋದಾಗ ಕೈ ತಾಗಿದೆಯೇ ಹೊರತು ಹೊಡೆದಿಲ್ಲ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದರು.
