ನಟ ವಿಶಾಲ್ ಸೆನ್ಸಾರ್ ಮಂಡಳಿ ಲಂಚ ಪ್ರಕರಣ: ತನಿಖೆಗೆ ಆದೇಶಿಸಿದ ಸಚಿವಾಲಯ –

ನಿನ್ನೆಯಷ್ಟೇ ತಮಿಳಿನ ಖ್ಯಾತ ನಟ ವಿಶಾಲ್, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿ.ಬಿ.ಎಫ್.ಸಿ) ಮೇಲೆ ಗುರುತರ ಆರೋಪ ಮಾಡಿದ್ದರು. ತಾವು ತಮ್ಮ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಪಡೆಯುವುದಕ್ಕಾಗಿ 6.50 ಲಕ್ಷ ರೂಪಾಯಿಯನ್ನು ನೀಡಿರುವುದಾಗಿ ಅವರು ಹೇಳಿಕೊಂಡಿದ್ದರು. ಯಾರಿಗೆ ಎಷ್ಟೆಲ್ಲ ಹಣ ನೀಡಲಾಗಿದೆ ಎಂದು ವಿವರ ಸಮೇತ ವಿಡಿಯೋ ಮಾಡಿದ್ದರು.
ಸೆನ್ಸಾರ್ ಮಂಡಳಿಯ ಅಧಿಕಾರಿಗಳಾದ ಎಂ.ರಾಜನ್ ಎನ್ನುವವರು ಮೂರು ಲಕ್ಷ ಮತ್ತು ಜೀಜಾ ರಾಮದಾಸ್ ಎನ್ನುವವರಿಗೆ 3.5 ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಹಾಕಿರುವ ವಿವರವನ್ನು ವಿಶಾಲ್ ಹೇಳಿದ್ದರು. ಸಾಕ್ಷಿ ಸಮೇತವಾಗಿ ವಿಶಾಲ್ ವಿಡಿಯೋ ಮಾಡಿ ಅದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳಿಗೆ ಟ್ಯಾಗ್ ಮಾಡಿದ್ದರು. ಇದರ ಗಂಭೀರತೆಯನ್ನು ಅರಿತ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೂಡಲೇ ತನಿಖೆಗೆ ಆದೇಶ ಮಾಡಿದೆ. ಸಿ.ಬಿ.ಎಫ್.ಸಿಯ ಹಿರಿಯ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ, ತನಿಖೆಗೆ ಆದೇಶ ಮಾಡಿದೆ. ಈ ಕುರಿತು ಇದೊಂದು ದುರಾದೃಷ್ಟ ಸಂಗತಿ ಎಂದು ವಿಷಾದ ವ್ಯಕ್ತ ಪಡಿಸಿದೆ. ಲಂಚಮುಕ್ತ ಆಡಳಿತ ಕೊಡಬೇಕು ಎನ್ನುವುದು ನಮ್ಮ ಗುರಿ. ಆದರೆ, ಇಂತಹ ಬೆಳವಣಿಗೆ ನಡೆದಿದ್ದು ನೋವು ತಂದಿದೆ. ವಿಶಾಲ್ ಅವರು ವಿಡಿಯೋ ಹಾಕಿದ 24 ಗಂಟೆಯೊಳಗೆ ತನಿಖೆಗೆ ಆದೇಶ ಮಾಡಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಸಚಿವಾಲಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ವಿಶಾಲ್ ಅವರಿಗೆ ಟ್ಯಾಗ್ ಮಾಡಲಾಗಿದೆ. ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್‍ಸಿ) (Censor Board) ಅಥವಾ ಸೆನ್ಸಾರ್ ಮಂಡಳಿಗಳ ಮೇಲೆ ಒಂದಿಲ್ಲೊಂದು ಆರೋಪಗಳು ಬರುತ್ತಲೇ ಇವೆ. ಇದೀಗ ತಮಿಳಿನ (Tamil) ಹೆಸರಾಂತ ನಟ ವಿಶಾಲ್ (Vishal) ಗುರುತರ ಆರೋಪವೊಂದನ್ನು ಮಾಡಿದ್ದರು. ತಮ್ಮ ತಮಿಳು ಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡಲು ಮುಂಬೈ ಸಿಬಿಎಫ್‍ಸಿ ಅಧಿಕಾರಿಗಳು ಲಂಚ ಕೇಳಿದ್ದರು ಎಂದು ಆರೋಪ ಮಾಡಿದ್ದರು. ತಮಿಳು ನಟನೆಯ ಮಾರ್ಕ್ ಆಂಟೋನಿ (Mark Antony)ರಿಲೀಸ್ ಆಗಿ, ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ಪಡೆಯಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾಗೆ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಬರೋಬ್ಬರಿ 6.50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ವಿಶಾಲ್ ಹೇಳಿದ್ದರು. ಈ ಕುರಿತು ಸಾಕ್ಷಿ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಹಿಂದಿಯಲ್ಲಿ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆವು. ತಾಂತ್ರಿಕ ಕಾರಣಗಳಿಂದಾಗಿ ಹಿಂದಿಯಲ್ಲಿ ಚಿತ್ರವನ್ನು ರೆಡಿ ಮಾಡಲು ಕಷ್ಟವಾಯಿತು. ಬಿಡುಗಡೆ ದಿನಾಂಕ ತೀರಾ ಹತ್ತಿರವಿದ್ದ ಕಾರಣದಿಂದಾಗಿ ಬೇಗ ಪ್ರಮಾಣ ಪತ್ರ ನೀಡುವಂತೆ ವಿನಂತಿಸಿದೆವು. ಆದರೆ, ಅಧಿಕಾರಿಗಳು ಬೇಗ ಪ್ರಮಾಣ ಪತ್ರ ಬೇಕು ಅಂದರೆ ಲಂಚ ನೀಡಿ ಎಂದರು ಎಂದು ವಿಶಾಲ್ ಮಾತನಾಡಿದ್ದರು. ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಚಿತ್ರತಂಡವು ಅವರು ಕೇಳಿದ ಹಣವನ್ನು ಲಂಚದ ರೂಪದಲ್ಲಿ ನೀಡಿರುವುದಾಗಿಯೂ ವಿಶಾಲ್ ಹೇಳಿಕೊಂಡಿದ್ದರು. ತಾವು ಹಣ ಕಳುಹಿಸಿದ ಬ್ಯಾಂಕ್ ಖಾತೆಯ ವಿವರವನ್ನೂ ಅವರು ಹಂಚಿಕೊಂಡಿದ್ದರು. ನಿಮಗೆ ಯಾವುದೇ ದಾರಿ ಕಾಣದೇ ಹಣವನ್ನು ಕೊಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದರು.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ