ಪ್ರಕರಣವೊಂದರ ತನಿಖೆಗೆಂದು ಕೇರಳಕ್ಕೆ ಹೋಗಿದ್ದ ಕರ್ನಾಟಕ ಪೊಲೀಸರ ತಂಡವನ್ನು ಲಂಚ ಪಡೆದ ಆರೋಪದ ಮೇಲೆ ಕೇರಳ ಪೊಲೀಸರು ಬಂಧಿಸಿರುವ ವಿಪರ್ಯಾಸದ ಘಟನೆ ವರದಿಯಾಗಿದೆ.
ಮೂವರು ಕಾನ್‌ಸ್ಟೆಬಲ್ ಸಹಿತ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಕರ್ನಾಟಕ ಪೊಲೀಸರು ಬೆಂಗಳೂರಿನ ವೈಟ್‌ಫೀಲ್ಡ್‌ನ ಸೆನ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಎಂದು ತಿಳಿದುಬಂದಿದೆ.
ಬಂಧಿತ ಕರ್ನಾಟಕ ಪೊಲೀಸರ ವಾಹನದಲ್ಲಿದ್ದ ಸುಮಾರು ನಾಲ್ಕು ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಕ್ರಿಪ್ಟೋ ಕರೆನ್ಸಿಯ ಬಗ್ಗೆ ತನಿಖೆಗಾಗಿ ಕರ್ನಾಟಕ ಪೊಲೀಸರ ತಂಡ ಕೇರಳಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇರಳದ ಕೊಚ್ಚಿ ಡಿಸಿಪಿ ಎಸ್ ಶಶಿಧರನ್, ‘ಕರ್ನಾಟಕ ಪೊಲೀಸರು ಎಂದು ಹೇಳಿಕೊಂಡ ತಂಡವು ತನ್ನ ಪರಿಚಯದವರೋರ್ವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಮಹಿಳೆಯೋರ್ವರು ದೂರು ನೀಡಿದ್ದರು. ಅವರನ್ನು ಬಿಡಬೇಕಾದರೆ ಮೊದಲು 25 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ 10 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಎಂದು ಹೇಳಿಕೊಂಡ ತಂಡ ಸಂಚರಿಸುತ್ತಿದ್ದ ವಾಹನವನ್ನು ತಡೆದಾಗ 3,95,000 ಹಣ ದೊರಕಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಿರಲಿಲ್ಲ. ಹಾಗಾಗಿ ಅವರನ್ನು ವಶಕ್ಕೆ ಪಡೆದು, ಬೆದರಿಸಿ ಹಣ ಸುಲಿಗೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ವೈಟ್‌ಫೀಲ್ಡ್‌ನ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆಂದು ಬಂದಾಗ ಈ ರೀತಿ ಬೇಡಿಕೆ ಇಟ್ಟಿದ್ದರು. ಮೂವರು ಕಾನ್‌ಸ್ಟೆಬಲ್ ಸಹಿತ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕ ಪೊಲೀಸರೊಂದಿಗೆ ಈ ಬಗ್ಗೆ ಸಂಪರ್ಕ ಸಾಧಿಸುತ್ತಿದ್ದೇವೆ. ಅವರು ಬಂದ ಬಳಿಕ ಈ ಪ್ರಕರಣದ ತನಿಖೆಯ ಬಗ್ಗೆ ಮುಂದುವರಿಸಲಿದ್ದೇವೆ. ಕರ್ತವ್ಯದಲ್ಲಿದ್ದಾಗಲೇ ಈ ರೀತಿ ನಡೆದಿರುವುದರಿಂದ ಕೆಲವೊಂದು ಕಾನೂನು ತೊಡಕುಗಳಿವೆ. ಆ ಬಗ್ಗೆಯೂ ಚರ್ಚೆ ನಡೆಸಲಿದ್ದೇವೆ’ ಎಂದು ತಿಳಿಸಿದ್ದಾರೆ.