ವಡಿವೇಲು (Vadivelu), ತಮಿಳಿನ ಅತ್ಯಂತ ಜನಪ್ರಿಯ, ಹಿರಿಯ ಹಾಸ್ಯ ನಟ. ಇತ್ತೀಚೆಗೆ ‘ಮಾಮನ್ನನ್’ (Maamannan) ಸಿನಿಮಾದಲ್ಲಿ ಗಂಭೀರ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಆದರೆ ವಡಿವೇಲು ಬಗ್ಗೆ ಆಗಾಗ್ಗೆ, ಅಲ್ಲಲ್ಲಿ ಕೆಲವು ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಿದೆ. ಇದೀಗ 90ರ ದಶಕದ ಟಾಪ್ ನೀಲಿ ಚಿತ್ರತಾರೆ, ನಟಿ ಶಕೀಲಾ (Shakeela), ಶೂಟಿಂಗ್ ಸೆಟ್ನಲ್ಲಿ ವಡಿವೇಲು ವರ್ತನೆ ಅವರ ವ್ಯಕ್ತಿತ್ವದ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಾರೆ.
ಶಕೀಲಾ, ‘ಗಲಾಟಾ ವಾಯ್ಸ್’ ಹೆಸರಿನ ಯೂಟ್ಯೂಬ್ ಚಾನೆಲ್ ತೆರೆದು ಹಾಸ್ಯ ನಟಿಯರ, ಪೋಷಕ ನಟಿಯರ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಇದೇ ಚಾನೆಲ್ನಲ್ಲಿ ತಮಿಳಿನ ಹಾಸ್ಯ ನಟಿ ಪ್ರೇಮ ಪ್ರಿಯಾ ಅವರ ಸಂದರ್ಶನವನ್ನು ಇತ್ತೀಚೆಗೆ ನಟಿ ಶಕೀಲಾ ಮಾಡಿದ್ದರು. ಈ ಸಂದರ್ಶನದಲ್ಲಿ ತಮಿಳಿನ ಹಿರಿಯ, ಜನಪ್ರಿಯ ಹಾಸ್ಯ ನಟ ವಡಿವೇಲು ಕುರಿತು ಇಬ್ಬರೂ ನಟಿಯರು ಮಾತನಾಡಿದ್ದಾರೆ.
ಪ್ರೇಮ ಪ್ರಿಯ ತಮಿಳಿನ ಹಲವು ಸಿನಿಮಾಗಳಲ್ಲಿ ಹಾಸ್ಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ತಮಗೆ ಹಲವು ಅವಕಾಶಗಳನ್ನು ತಪ್ಪಿಸಲಾಯ್ತು ಎಂದು ಶಕೀಲ ಜೊತೆಗಿನ ಸಂದರ್ಶನದಲ್ಲಿ ಪ್ರೇಮ ಪ್ರಿಯಾ ಹೇಳಿಕೊಂಡಿದ್ದಾರೆ. ಶೂಟಿಂಗ್ ಸೆಟ್ಗೆ ಹೋದಾಗ ಅಲ್ಲಿ ನಾನು ಕಂಡರೆ ಸಾಕು ವಡಿವೇಲು ನನ್ನನ್ನು ವಾಪಸ್ ಕಳಿಸಿಬಿಡುತ್ತಿದ್ದರು. ನಾನು ಸಿನಿಮಾದಲ್ಲಿದ್ದೀನಿ ಎಂದರೆ ನನ್ನನ್ನು ಆ ಸಿನಿಮಾದಿಂದ ಹೊರಗಿಡುವಂತೆ ನಿರ್ದೇಶಕರಿಗೆ ಹೇಳುತ್ತಿದ್ದರು ಎಂದಿದ್ದಾರೆ ಪ್ರೇಮ ಪ್ರಿಯಾ. ”ವಡಿವೇಲು ಜೊತೆಗೆ ನಿಮಗೆ ಮೀಟೂ ಅನುಭವ ಏನಾದರೂ ಆಗಿದೆಯೇ?’ ಎಂದು ಶಕೀಲಾ, ಪ್ರೇಮ ಪ್ರಿಯಾರನ್ನು ಕೇಳಿದಾಗ, ‘ಇಲ್ಲ ಆ ರೀತಿಯ ಸಮಸ್ಯೆ ಆಗಿಲ್ಲ, ನನ್ನದು ಬೇರೆ ರೀತಿಯ ಸಮಸ್ಯೆ’ ಎಂದಿದ್ದಾರೆ. ಆಗ ಶಕೀಲಾ, ”ನೀನೇನು ಹೇಳುವದು ಬೇಕಾಗಿಲ್ಲ, ವಡಿವೇಲು ಎಂಥಹಾ ಮನುಷ್ಯ, ಸೆಟ್ನಲ್ಲಿ ನಟಿಯರೊಟ್ಟಿಗೆ ಅವನ ವರ್ತನೆ ಹೇಗಿರುತ್ತದೆ, ನಟಿಯರ ಬಳಿ ಏನೇನಲ್ಲ ಅವನು ಕೇಳುತ್ತಾನೆ ಎಂಬುದು ನನಗೆ ಗೊತ್ತು” ಎಂದಿದ್ದಾರೆ. ”ವಡಿವೇಲುಗೆ ಕ್ಷಮೆ ಕೇಳಿ ವಿಡಿಯೋ ಅಪ್ಲೋಡ್ ಮಾಡಿ ಎಂದು ಒಬ್ಬ ನಿರ್ದೇಶಕರು ಹೇಳಿದರು ಆದರೆ ನಾನು ಮಾಡಲಿಲ್ಲ ಏಕೆಂದರೆ ಈ ಹಿಂದೆ ನಾನು ವಡಿವೇಲು ಬಗ್ಗೆ ಮಾತನಾಡಿದ್ದೆಲ್ಲ ಸತ್ಯ. ವಡಿವೇಲುಗೆ ನನ್ನನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಒಂದು ಸಿನಿಮಾದಲ್ಲಿ ಅವರು ನಾನು ಒಟ್ಟಿಗೆ ನಟಿಸಿದೆವು, ಆಗ ನಾನು ಕೇಳಿದೆ, ನನ್ನನ್ನು ಕಂಡರೆ ಯಾಕೆ ನಿಮಗೆ ದ್ವೇಷ ಎಂದು ಆಗ ವಡಿವೇಲು, ಅಯ್ಯೋ ಹಾಗೇನೂ ಇಲ್ಲ, ಮುಂದೆ ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡೋಣ ಎಂದರು ಆದರೆ ಅದು ಆಗಲಿಲ್ಲ” ಎಂದಿದ್ದಾರೆ ಪ್ರೇಮ ಪ್ರಿಯಾ. ಆದರೆ ಶಕೀಲಾ, ”ವಡಿವೇಲು ಅವರೆ, ನೀವು ನನಗೆ ಬಹಳ ವರ್ಷಗಳಿಂದಲೂ ಗೊತ್ತು. ನಿಮಗೆ ಸೆಟ್ಗೆ ಬರಲು ಕಾರು ಸಹ ಕೊಡುತ್ತಿರಲಿಲ್ಲ ಅಂಥಹಾ ಸಮಯದಿಂದಲೂ ನಾನು ನಿಮ್ಮನ್ನು ನೋಡಿದ್ದೇನೆ. ಬಹಳ ಜನ ಸಣ್ಣ ಸಣ್ಣ ಕಲಾವಿದರು ನಿಮ್ಮ ಬಗ್ಗೆ ಹೀಗೆ ಮಾತನಾಡುತ್ತಾರೆ ನನಗೆ ಬಹಳ ಬೇಸರವಾಗುತ್ತದೆ. ನೀವು ದೊಡ್ಡ ನಟರು ಹೀಗೆಲ್ಲ ಮಾಡಬೇಡಿ” ಎಂದು ಶಕೀಲ ಮನವಿ ಮಾಡಿದ್ದಾರೆ.