ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಸಚಿನ್ ಬಿಷ್ಣೋಯ್‌ನನ್ನು (Sachin Bishnoi) ಅಜರ್‌ಬೈಜಾನ್‌ನ (Azerbaijan) ಬಾಕುದಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ದೆಹಲಿಯ ವಿಶೇಷ ಪೊಲೀಸ್ ಆಯುಕ್ತ ಹರಗೋಬಿಂದರ್ ಸಿಂಗ್ ಧಲಿವಾಲ್ ಹೇಳಿದ್ದಾರೆ ಹತ್ಯೆಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ದರೋಡೆಕೋರ ಸಚಿನ್ ಬಿಷ್ಣೋಯ್‌ನನ್ನು ಬಂಧಿಸಲು ಭದ್ರತಾ ಏಜೆನ್ಸಿಗಳ ತಂಡವನ್ನು ಅಜೆರ್ಬೈಜಾನ್‌ಗೆ ಕಳುಹಿಸಲಾಗಿತ್ತು. ಎರಡು ದೇಶಗಳ ಮಾತುಕತೆ ಬಳಿಕ ಆರೋಪಿಯನ್ನು ದೆಹಲಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಕುಖ್ಯಾತ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್ ಸೋದರಳಿಯನಾಗಿರುವ ಸಚಿನ್ ಬಿಷ್ಣೋಯ್ ಕಳೆದ ವರ್ಷ ಮೇನಲ್ಲಿ ಸಿಧು ಮೂಸೆವಾಲಾ ಹತ್ಯೆಯ ಬಳಿಕ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತದಿಂದ ಪರಾರಿಯಾಗಿ, ತಲೆಮರೆಸಿಕೊಂಡಿದ್ದ. ಸಚಿನ್ ಬಿಷ್ಣೋಯ್ ಬಂಧನಕ್ಕೆ ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ರಾತ್ರಿ ಅಜೆರ್ಬೈಜಾನ್ ತಲುಪಿತ್ತು. ಸಹಾಯಕ ಪೊಲೀಸ್ ಕಮಿಷನರ್ ಮತ್ತು ಕೌಂಟರ್ ಇಂಟೆಲಿಜೆನ್ಸ್ ಘಟಕದ ಇಬ್ಬರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸುಮಾರು ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡಕ್ಕೆ ಬಿಷ್ಣೋಯ್ ಹಸ್ತಾಂತರಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು 2022ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಒಂದು ದಿನದ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯ ಗೋಲ್ಡಿ ಬ್ರಾರ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸೇಡು ತೀರಿಸಿಕೊಳ್ಳಲು ಕೊಲೆಯನ್ನು ಯೋಜಿಸಿದ್ದಾಗಿ ಒಪ್ಪಿಕೊಂಡಿದ್ದ.