ಚಿಕ್ಕಬಳ್ಳಾಪುರ: ಸದಾ ಒಂದಲ್ಲ ಒಂದು ವಿಚಾರವಾಗಿ ಸದ್ದು ಮಾಡುತ್ತಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಈಗ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕ್ಷೇತ್ರ ಸಂಚಾರ ಮಾಡುತ್ತಿರುವ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ಕ್ಷೇತ್ರದ ಮಹಿಳೆಯರಿಗೆ ಸೀರೆಗಳ ಉಡುಗೊರೆ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ (Varamahalakshmi Festival) ಹೆಸರಲ್ಲಿ ಮಹಿಳೆಯರಿಗೆ ಬಾಗಿನ ಕೊಟ್ಟಿದ್ದಾರೆ. ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಸೀರೆ, ಬಳೆ, ಹರಿಶಿನ, ಕುಂಕಮ ಬಾಗಿನ ಕೊಟ್ಟಿದ್ದಾರೆ. ಹಳ್ಳಿ-ಹಳ್ಳಿಗೂ ತೆರಳಿ ಸೀರೆ ವಿತರಣೆ (Saree Gift) ಮಾಡಲಿದ್ದಾರೆ. ಜೊತೆಗೆ 20 ಸಾವಿರ ಶಾಲಾ ಮಕ್ಕಳಿಗೆ ಬಟ್ಟೆ ನೀಡುವ ಕಾರ್ಯಕ್ರಮಕ್ಕೂ ಚಾಲನೆ ಕೊಟ್ಟಿದ್ದಾರೆ. ಈ ವೇಳೆ ಮಾತನಾಡುತ್ತಾ ಪ್ರದೀಪ್ ಈಶ್ವರ್, 5 ವರ್ಷವೂ 60 ಸಾವಿರ ಮನೆಗಳಿಗೆ ವರಮಹಾಲಕ್ಷ್ಮಿ ಹಬ್ಬಕ್ಕೂ ಸೀರೆ ಕೊಡ್ತೀನಿ. 20 ಸಾವಿರ ಶಾಲಾ ಮಕ್ಕಳಿಗೆ ಪ್ರತಿವರ್ಷ ಬಟ್ಟೆ ಕೊಡಿಸ್ತೇನೆ. ರಸ್ತೆ ಅಭಿವೃದ್ಧಿಯನ್ನೂ ಮಾಡಿಸ್ತೀನಿ. ಏನೇ ಆದರೂ ನಾನಿದ್ದೇನೆ. ಒಂದೊಳ್ಳೆ ಕೆಲಸ ಮಾಡಬೇಕು ಅನ್ನೋದಷ್ಟೇ ನನ್ನ ಕನಸು ಅಂತಾ ಜನರಿಗೆ ಭರವಸೆ ನೀಡಿದ್ದಾರೆ ಮಾಧ್ಯಮಗಳೊಂದಿಗೆ ಮಾತನಾಡಿ, ಒಂದು ಕಾಲದಲ್ಲಿ ಊಟ, ಬಟ್ಟೆಗೂ ಕಷ್ಟ ಇತ್ತು. ಕ್ಷೇತ್ರದ ಜನತೆ ನನ್ನನ್ನ ಅಣ್ಣ, ತಮ್ಮನ ತರ ಅಂದುಕೊಂಡು ಗೆಲ್ಲಿಸಿದ್ದಾರೆ. ನಾನೂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಆದ್ದರಿಂದ 60 ಸಾವಿರ ಮನೆಗಳಿಗೆ ಸೀರೆ, 20 ಸಾವಿರ ಶಾಲೆ ಮಕ್ಕಳಿಗೆ ಬಟ್ಟೆ ಕೊಡುತ್ತಿದ್ದೇನೆ. ಐದು ವರ್ಷವೂ ಇದು ಮುಂದುವರಿಯುತ್ತೆ ಅಂತಾ ಭರವಸೆ ನೀಡಿದ್ದಾರೆ.