ಪಬ್‌ಜಿಯಲ್ಲಿ ಗೆಳೆತನವಾಗಿ ಆ ಗೆಳೆತನ ಪ್ರೀತಿಗೆ ತಿರುಗಿ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್ ಕೆಲವು ದಿನಗಳಿಂದ ನೋಯ್ಡಾದ ಪ್ರಿಯಕರನ ಮನೆಯಲ್ಲಿ ಇದ್ದಾರೆ. ಇದೀಗ ಆಕೆ ಗರ್ಭಿಣಿ ಎಂದು ವರದಿಯಾಗಿದ್ದು, ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗ್ತಿದೆ. ಭಾರತದಲ್ಲಿನ ತನ್ನ ಪ್ರಿಯಕರಿನಿಗಾಗಿ ಪಾಕಿಸ್ತಾನದಿಂದ ನೋಯ್ಡಾಗೆ ಬಂದಿರುವ 30 ವರ್ಷದ ಸೀಮಾ ಹೈದರ್ ಶೀಘ್ರದಲ್ಲೇ ಐದನೇ ಮಗುವಿಗೆ ಜನ್ಮ ನೀಡಲಿದ್ದಾಳೆ ಎನ್ನುತ್ತಿವೆ ವರದಿಗಳು.
ಕೆಲವು ವರದಿಗಳ ಪ್ರಕಾರ ಪಾಕಿಸ್ತಾನ ಮೂಲದ ನಾಲ್ಕು ಮಕ್ಕಳ ತಾಯಿ ಸೀಮಾ ಮತ್ತೆ ಗರ್ಭಿಣಿಯಾಗಿದ್ದಾಳಂತೆ. ಈಕೆಯ ಮೊದಲ ಪತಿ ಪಾಕಿಸ್ತಾನದ ಗೋಲಂ ಹೈದರ್‌ಗೆ ಮೂವರು ಹೆಣ್ಣುಮಕ್ಕಳು, ಒಬ್ಬ ಮಗ ಸೇರಿ ನಾಲ್ವರು ಮಕ್ಕಳು ಇದ್ದಾರೆ. ನೋಯ್ಡಾ ವ್ಯಕ್ತಿ ಸಚಿನ್ ಮೀನಾ ಕೆಲ ದಿನಗಳ ಹಿಂದಷ್ಟೇ ಸೀಮಾಳನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದರಂತೆ. ಸದ್ಯ ಪಾಕ್ ಮೂಲಕ ಸೀಮಾ ಹೈದರ್ ಪಜ್‌ಬಿ ಲವ್ ಪ್ರಕರಣದಲ್ಲಿ ಪೊಲೀಸರು, ಭದ್ರತಾ ಏಜೆನ್ಸಿಗಳು ತುಂಬಾ ಗೊಂದಲದಲ್ಲಿವೆ. ಈಕೆ ನಿಜವಾಗಿಯೂ ತನ್ನ ಪ್ರಿಯಕರಿನಿಗಾಗಿ ಭಾರತಕ್ಕೆ ಬಂದಿದ್ದಾಳಾ ಇಲ್ಲವೇ ಗೂಢಚಾರಿಕೆಗಾಗಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ನಡುವೆ ಪ್ರಕರಣಕ್ಕೆ ಹೊಸ ಹೊಸ ಟ್ವಿಸ್ಟ್‌ಗಳು ಸಿಗುತ್ತಿವೆ. ಪಬ್‌ಜಿ ಆಡುವಾಗ ಪಾಕಿಸ್ತಾನ ಮೂಲದ ಸೀಮಾ ಹೈದರ್ ನೋಯ್ಡಾ ಮೂಲದ ವ್ಯಾಪಾರಿ ಸಚಿನ್ ಮೀನಾ ಅವರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ನೇಪಾಳ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದು ಸಿಕ್ಕಿ ಬಿದ್ದಿದ್ದಾಳೆ. ಈಕೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಬಂದಿರುವ ಈಕೆ ಸದ್ಯ ತನ್ನ ಮಕ್ಕಳೊಂದಿಗೆ ಸಚಿನ್ ಅವರೊಂದಿಗೆ ಜೀವನ ನಡೆಸುತ್ತಿದ್ದಾಳೆ. ಈಕೆಯ ನಾಲ್ಕು ಮಕ್ಕಳು ಸಚಿನ್ ಅವರನ್ನೇ ಅಪ್ಪಾ ಅಂತ ಕರೆಯುತ್ತಿದ್ದಾರೆಂದು ಸೀಮಾ ಹೇಳಿಕೊಂಡಿದ್ದಾರೆ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಜುಲೈ 4 ರಂದು ನೋಯ್ಡಾದ ಗೌತಮ್ ಬುದ್ದ ನಗರ ಪೊಲೀಸರು ಸೀಮಾ ಹೈದರ್ ಅವರನ್ನು ಬಂಧಿಸಿದ್ದರು. ಈಕೆಗೆ ಆಶ್ರಯ ನೀಡಿದ ಆರೋಪದ ಮೇಲೆ ಸಚಿನ್ ಮತ್ತು ಅವರ ತಂದೆಯನ್ನೂ ಬಂಧಿಸಲಾಗಿತ್ತು, ಪೊಲೀಸರು ಸೀಮಾ ಅವರಿಂದ ನಾಲ್ಕು ಮೊಬೈಲ್, ಐದು ಪಾಸ್ ಪೋರ್ಟ್‌ಗಳು ಹಾಗೂ ಎರಡು ವಿಡಿಯೊ ಕ್ಯಾಸೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಗದರ್ ಸಿನಿಮಾದಿಂದ ಸ್ಪೂರ್ತಿ ಪಡೆದು ಪ್ರೀತಿಸಿದ್ದೇವೆ ಎಂದು ಸಚಿನ್ ಮತ್ತು ಸೀಮಾ ಹೇಳಿಕೊಂಡಿದ್ದಾರೆ.ಇದರ ನಡುವೆ ಕೆಲವು ಅಚ್ಚರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಎಟಿಎಸ್ ಸೀಮಾ ಮತ್ತು ಸಚಿನ್ ಅವರನ್ನು ವಿಚಾರಣೆ ಒಳಪಡಿಸಿದಾಗ ಪಾಕಿಸ್ತಾನದ ಸೇನೆಯಲ್ಲಿ ತನ್ನ ಸಹೋದರನೊಬ್ಬ ಕೆಲಸ ಮಾಡುತ್ತಿದ್ದಾನೆ ಎಂಬುದನ್ನು ಸೀಮಾ ಒಪ್ಪಿಕೊಂಡಿದ್ದಾಳಂತೆ. ಹಲವು ಆಯಾಮಗಳಲ್ಲಿ ಈಕೆಯನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.