ಫೇಸ್​​​ಬುಕ್ ಪರಿಚಯ! ಪಾಕಿಸ್ತಾನದ ಪ್ರಿಯತಮನ ಹಂಬಲಿಸಿ, ಭಾರತದ ಗಡಿ ದಾಟಿದ ವಿವಾಹಿತ ಮಹಿಳೆ – ಕರುನಾಡ ನ್ಯೂಸ್


ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳ ಗಡಿ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಮತ್ತೊಂದು ಅಂಥದ್ದೇ ಘಟನೆ ಭಾರತದ ಕಡೆಯಿಂದ ಕೇಳಿಬಂದಿದೆ. ಭಾರತೀಯ ಮಹಿಳೆಯೊಬ್ಬರು ತನ್ನ ಪ್ರೇಮಿಯನ್ನು ಭೇಟಿಯಾಗಲು ಗಡಿ ದಾಟಿದ್ದಾರೆ. ರಾಜಸ್ತಾನದ ಭಿವಾಡಿ ಜಿಲ್ಲೆಯ (Rajasthan’s Bhiwadi district) ವಿವಾಹಿತ ಭಾರತೀಯ (India) ಮಹಿಳೆಯೊಬ್ಬರು ಪಾಕಿಸ್ತಾನದ (Pakistan) ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಫೇಸ್‌ಬುಕ್‌ನಲ್ಲಿ (Facebook) ಸ್ನೇಹ ಬೆಳೆಸಿದ ಮತ್ತು ಪ್ರೀತಿಸುತ್ತಿದ್ದ (border love story) ವ್ಯಕ್ತಿಯನ್ನು ಭೇಟಿಯಾಗಲು ಅವರು ಹೊರಟಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅಂಜು (34) ಎಂದು ಗುರುತಿಸಲಾದ ಮಹಿಳೆಯು ನಸ್ರುಲ್ಲಾ ಎಂಬ ವ್ಯಕ್ತಿಯನ್ನು ಭೇಟಿಯಾಗಲು ತನ್ನ ಇಬ್ಬರು ಮಕ್ಕಳು ಮತ್ತು ಪತಿಯನ್ನು ಬಿಟ್ಟು ಗಡಿಯಾಚೆ ಹೋಗಿದ್ದಳು. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಸ್ರುಲ್ಲಾ ಮತ್ತು ಅಂಜು ಕೆಲವು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸ್ನೇಹಿತರಾದರು ಎಂದು ವರದಿಯಾಗಿದೆ. ಲಾಹೋರ್ ತಲುಪಿದ ನಂತರ, ಮಹಿಳೆ ತನ್ನ ಪತಿಗೆ (ಅರವಿಂದ್) ಕರೆ ಮಾಡಿ ಮತ್ತು ತಾನು ಸ್ನೇಹಿತನನ್ನು ಭೇಟಿಯಾಗಲು ಲಾಹೋರ್‌ನಲ್ಲಿದ್ದೇನೆ ಮತ್ತು ಮೂರು-ನಾಲ್ಕು ದಿನಗಳಲ್ಲಿ ಭಾರತಕ್ಕೆ ಹಿಂತಿರುಗುವುದಾಗಿ ಹೇಳಿದ್ದಾರೆ. ಆದರೆ ಅಂಜು ತನ್ನ ಪ್ರಿಯಕರನನ್ನು ಭೇಟಿಯಾಗಲು ಗಡಿದಾಟಿ ಹೋಗಿದ್ದಾಳೆ ಎಂದು ಅರವಿಂದ್ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದಾರೆ. ದಂಪತಿಗೆ 15 ವರ್ಷದ ಬಾಲಕಿ ಹಾಗೂ 5 ವರ್ಷದ ಗಂಡು ಮಗುವಿದೆ. ಆಕೆ ಪಾಕಿಸ್ತಾನದಲ್ಲಿರುವ ನಸ್ರುಲ್ಲಾ ಎಂಬಾತನನ್ನು ಭೇಟಿಯಾಗಲು ಹೋಗಿದ್ದಾಳೆ ಎಂಬುದೇ ತನಗೆ ತಿಳಿದಿರಲಿಲ್ಲ ಎಂದು ಅರವಿಂದ್ ಹೇಳಿದ್ದಾರೆ. ವಿದೇಶದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸಿದ್ದರಿಂದ 2020 ರಲ್ಲಿ ಆಕೆಗೆ ಪಾಸ್‌ಪೋರ್ಟ್ ನೀಡಲಾಯಿತು ಎಂದು ಅವರು ಹೇಳಿದರು. ವರದಿಗಳ ಪ್ರಕಾರ ಈ ಮೊದಲು ಆಕೆ ಯಾವುದೇ ವಿದೇಶ ಪ್ರವಾಸ ಮಾಡಿಲ್ಲ. ಅಂಜು ಪಾಕಿಸ್ತಾನಕ್ಕೆ ಹೋಗಲು ಹೊಸ ಸಿಮ್ ಅನ್ನು ಸಹ ಖರೀದಿಸಿದ್ದರು, ಅದರ ಸಂಖ್ಯೆಯನ್ನು ಆಕೆ ತನ್ನ ಪತಿಗೆ ನೀಡಿರಲಿಲ್ಲ. ವರದಿಗಳ ಪ್ರಕಾರ, ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿದ ಅಂಜು, ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಮೂರು ದಿನಗಳ ಹಿಂದೆ ಲಾಹೋರ್ ತಲುಪಿದ ಆಕೆ ಈಗ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಯಲ್ಲಿದ್ದಾರೆ. ಅರವಿಂದ್ 2005 ರಿಂದ ಭಿವಾಡಿಯಲ್ಲಿ ಕೆಲಸ ಮಾಡುತ್ತಿದ್ದು, 2007 ರಲ್ಲಿ ಅಂಜು ಅವರನ್ನು ಮದುವೆಯಾಗಿದ್ದರು. ಅಂಜು ಕೂಡ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.ಅಂಜು ಆರಂಭದಲ್ಲಿ ಪೊಲೀಸ್ ವಶದಲ್ಲಿದ್ದರು. ಆದರೆ ಆಕೆಯ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಲಾಯಿತು. ಅಂಜು ಅವರ ಎಲ್ಲಾ ಪ್ರಯಾಣದ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದ ನಂತರ ಆಕೆಗೆ ಹೋಗಲು ಅನುಮತಿ ನೀಡಲಾಯಿತು. ಅಂಜು ಭಾರತದಿಂದ ವಾಘಾ-ಅಟ್ಟಾರಿ ಗಡಿಯ ಮೂಲಕ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ದೇಶಕ್ಕೆ ಕೆಟ್ಟ ಹೆಸರು ತರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂದು ಮೂಲವೊಂದು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ