ಚಿಕ್ಕಮಗಳೂರು: ಮಲೆನಾಡು (Malenadu) ಭಾಗದಲ್ಲಿ ಅಬ್ಬರದ ಮಳೆ (Rain) ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕಳಸ (Kalasa) ತಾಲೂಕಿನ ಹೆಬ್ಬಾಳೆ ಸೇತುವೆ (Hebbale Bridge) ಮುಳುಗಡೆಯಾಗಿದೆ. ಕಾಫಿನಾಡಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ. ಇದರ ಪರಿಣಾಮ ಕಳಸ – ಹೊರನಾಡು ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಸುತ್ತ ಹತ್ತಾರು ಹಳ್ಳಿಯ ಜನರು ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಅನ್ಯ ಮಾರ್ಗವಿದ್ದರೂ 8ರಿಂದ 10 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಅದೇ ರೀತಿ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳ ಒಳಹರಿವು ಹೆಚ್ಚಳವಾಗಿದೆ. ಭಾರೀ ಮಳೆಗೆ ಮಲೆನಾಡಿನ ಜನರು ಕಂಗಾಲಾಗಿದ್ದಾರೆ.