9 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕಣ ಸಂಬಂಧ ಕಿಚ್ಚ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಿರ್ಮಾಪಕರಾದ ಎಂ.ಎನ್ ಕುಮಾರ್ ಹಾಗೂ ಎಂ.ಎನ್ ಸುರೇಶ್ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇಂದು(ಜುಲೈ 15) ನಗರದ ಜೆಎಂಎಫ್‌ಸಿ ಕೋರ್ಟ್‌ಗೆ ಆಗಮಿಸಿ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕಳೆದ ಎರಡು ವಾರಗಳಿಂದ ಕಿಚ್ಚ ಸುದೀಪ್ ಮತ್ತು ಎಂ. ಎನ್ ಕುಮಾರ್ ನಡುವಿನ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಎಮ್ ಎನ್ ಕುಮಾರ್ ಆರೋಪಗಳಿಗೆ ಸೂಕ್ತ ದಾಖಲೆ ನೀಡಬೇಕು, ಸುಳ್ಳು ಆರೋಪ ಮಾಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಸುದೀಪ್ 10 ದಿನ ಗಡುವು ನೀಡಿ ಲೀಗಲ್ ನೋಟಿಸ್ ನೀಡಿದ್ದರು. ಆದರೆ ಅದಕ್ಕೆ ಉತ್ತರ ಸಿಗದ ಹಿನ್ನೆಲೆಯಲ್ಲಿ ಸುದೀಪ್ ಇದೀಗ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಹೇಳಿದಂತೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಕಿಚ್ಚ ಸುದೀಪ್, ‘ಯಾರೇ ಏನೆ ಆರೋಪ ಮಾಡಿದ್ರು ಕೋರ್ಟ್ ನಿಂದ ಸರಿ ಉತ್ತರ ಸಿಗುತ್ತೆ. ದೇವರು ಒಳ್ಳೆದು ಮಾಡಲಿ. ಯಾವುದೇ ಸುಳ್ಳಿರಲಿ, ಸತ್ಯ ಇರಲಿ ಬಹಿರಂಗವಾಗಿ ಹೊರಗೆ ಬರಲೇ ಬೇಕು. ಸರಿಯಾದ ಮಾರ್ಗದಲ್ಲಿ ಹೋಗ್ತಿದ್ದೀನಿ ಅಂತಾ ನಾನು ಅಂದ್ಕೊಂಡಿದೀನಿ. ಕೋರ್ಟ್ ಗೆ ಹೋದ್ರೆ ಎಲ್ಲಾ ಸರಿ ಹೋಗುತ್ತೆ. ನಾನು ಕಲಾವಿದ ಆದ್ಮೇಲೆ ಎಲ್ಲರಿಗೂ ಸಹಾಯ ಮಾಡ್ತೀನಿ ಅಂತಾ ಚಾರಿಟಬಲ್ ಟ್ರಸ್ಟ್ ಓಪನ್ ಮಾಡಿಲ್ಲ. ಮಾಧ್ಯಮವನ್ನ ಸರಿಯಾಗಿ ಬಳಸಿಕೊಳ್ಳಬೇಕು. ಬಾಯಿ ಇದೆ ಅಂತಾ ಹೆಂಗ್ ಬೇಕು ಹಂಗೆ ಮಾತಾಡ್ಬಾರ್ದು’ ಎಂದು ಹೇಳಿದರು. ‘ನಾನು ಸರಿಯಾಗೆ ನಡ್ಕೊಂಡಿ ಬಂದಿದ್ದೀನಿ. ಎಲ್ಲರ ಆರೋಪಕ್ಕೆ ನಾನು ಉತ್ತರ ಕೊಡಲ್ಲ. ಎಲ್ಲಿ ಇತ್ಯರ್ಥ ಆಗ್ಬೇಕು ಅಲ್ಲಿ ಇತ್ಯರ್ಥ ಆಗುತ್ತೆ. ಅದಕ್ಕೆ ನಾನು ಕೋರ್ಟ್ ಗೆ ಬಂದೆ.
ಜಾಕ್ ಮಂಜು ಏನ್ ಉತ್ತರ ಕೊಡಬೇಕಿತ್ತು ಕೊಟ್ಟಿದಾರೆ. ನಾನೇ ಬಂದು ಪತ್ರಿಕಾಗೋಷ್ಠಿ ಮಾಡಿದ್ರೆ ಅವ್ರಿಗೂ ನಂಗೂ ಏನ್ ವ್ಯತ್ಯಾಸ ಇರುತ್ತೆ. ನಾನು ಬೆಂಡಾಗಿ ಕೂಡ ಇನ್ನೊಬ್ರಿಗೆ ಕೆಟ್ಟ ಉದಾಹರಣೆ ಆಗ್ಬಾರ್ದು. ನಾನು ಸಂಪಾದನೆ ಮಾಡಿರೋ ಹೆಸರಾಗಲಿ, ಸ್ಟಾರ್ ಗಿರಿ ಆಗಲಿ ಯಾರಿಂದಲೂ ಅಳಿಸೋಕೆ ಆಗಲ್ಲ. ಹಂಗೇನಾದ್ರು ಆಗುತ್ತೆ ಅಂದ್ರೆ ನಾನು ಏನೂ ಮಾಡಿಲ್ಲ ಅಂತಾ ಅರ್ಥ’ ಎಂದು ಕಿಚ್ಚ ಸುದೀಪ್ ಹೇಳಿದರು.