ಮಂಡ್ಯ: ಕೆಎಸ್‌ಆರ್‌ಟಿಸಿ ಚಾಲಕ (KSRTC Driver) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ (Suicide Attempt) ಪ್ರಕರಣಕ್ಕೆ ಈಗ ಒಂದು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಹಾಗೂ ಜೆಡಿಎಸ್ (JDS) ಕಾರ್ಯಕರ್ತರು ಅಂಬುಲೆನ್ಸ್ (Ambulence) ಅನ್ನು ತಡೆದಿದ್ದರು ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy) ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯವನ್ನು ಜೆಡಿಎಸ್ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.
ನಾಗಮಂಗಲದ ಕೆಎಸ್‌ಆರ್‌ಟಿಸಿ ಡ್ರೈವರ್ ಜಗದೀಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದ ಅಂಬುಲೆನ್ಸ್ ಅನ್ನು ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಬೆಂಬಲಿಗರು ಅಡ್ಡಗಟ್ಟುವ ದೃಶ್ಯ ಪತ್ತೆಯಾಗಿದೆ. ನಾಗಮಂಗಲ ಟಿಬಿ ವೃತ್ತದ ಬಳಿ ಸುರೇಶ್‌ಗೌಡ ಅಡ್ಡಗಟ್ಟಿ ನಿಲ್ಲಿಸಿದ್ದರು. ಬಳಿಕ ಅಂಬುಲೆನ್ಸ್‌ನಲ್ಲಿದ್ದವರೊಂದಿಗೆ ಸುರೇಶ್ ಗೌಡ ಮಾತನಾಡಿದ್ದರು. ಈ ಘಟನೆ ಜುಲೈ 6ರ ಮಧ್ಯರಾತ್ರಿ 1 ಗಂಟೆ ವೇಳೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡ ಹಾಗೂ ಜೆಡಿಎಸ್ ಕಾರ್ಯಕರ್ತರು ಅಂಬುಲೆನ್ಸ್ ತಡೆದಿದ್ದರು. ಜಗದೀಶ್‌ನ್ನು ಬಿಜಿಎಸ್ ಆಸ್ಪತ್ರೆಯಿಂದ ಮೈಸೂರಿಗೆ ರವಾನೆ ಮಾಡುವಾಗ ತಡೆದಿದ್ದಾರೆ. ಅವರಿಗೆ ಜಗದೀಶ್ ಬದುಕಿಸುವ ಉದ್ದೇಶ ಇರಲಿಲ್ಲ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದರು.
ಇದಾದ ಬಳಿಕ ನಮ್ಮ ಕಾರ್ಯಕರ್ತರು ಅಂಬುಲೆನ್ಸ್ ಅಡ್ಡಗಟ್ಟಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಇದೀಗ ಘಟನೆಗೆ ಸಂಬಂಧಿಸಿಂತೆ ವೀಡಿಯೋ ಬಿಡುಗಡೆ ಮಾಡಿರುವ ಜೆಡಿಎಸ್, ನಾವು ಜಗದೀಶ್‌ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವಿಚಾರಿಸಲು ಅಂಬುಲೆನ್ಸ್ ಅನ್ನು ನಿಲ್ಲಿಸಿದ್ದೆವು ಎಂದು ಸ್ಪಷ್ಟಪಡಿಸಿದೆ. ಜಗದೀಶ್‌ನ ಎಲ್ಲಿಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಬಿಜಿಎಸ್‌ನಲ್ಲಿ ಚಿಕಿತ್ಸೆ ಕೊಡೋಕೆ ಆಗಲ್ವಾ? ಮಣಿಪಾಲ್‌ಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಸರಿ ಹೋಗಿ ಎಂದು ಸುರೇಶ್ ಗೌಡ ಮಾತನಾಡಿರುವ ವೀಡಿಯೋ ರಿಲೀಸ್ ಆಗಿದೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರಕ್ರಿಯೆ ನೀಡಿರುವ ಸುರೇಶ್ ಗೌಡ, ನನಗೆ ಯಾವ ದುರುದ್ದೇಶವಿಲ್ಲ. ನಾನು ಜಗದೀಶ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುವಾಗ ಅವರ ಕುಟುಂಬಸ್ಥರು ಫೋನ್ ಮಾಡಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾ ಇದ್ದೀವಿ, ನೀವು ನಾಗಮಂಗಲದಲ್ಲಿಯೇ ಇರಿ. ಅಲ್ಲಿ ನಿಲ್ಲಿಸುತ್ತೇವೆ ಎಂದಿದ್ದರು. ಹಾಗೆ ನಾಗಮಂಗಲದಲ್ಲಿ ಅಂಬುಲೆನ್ಸ್ ನಿಲ್ಲಿಸಿದ್ರು. ಬಳಿಕ ನಾನು ಹೋಗಿ ಎಂದಾಗ ಅವರು ಹೋದರು ಎಂದು ತಿಳಿಸಿದರು. ಜಗದೀಶ್ ಆಸ್ಪತ್ರೆಗೆ ಸೇರಿಸಿದ್ದು ಜೆಡಿಎಸ್ ಕಾರ್ಯಕರ್ತರೆ, ಆತನನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದು ನಮ್ಮ ಕಾರ್ಯಕರ್ತರೆ. ನನಗೆ ಯಾವುದೇ ದುರುದ್ದೇಶವಿಲ್ಲ, ಹಾಗೆ ಏನಾದ್ರು ಇದ್ರೆ ದೊಡ್ಡ ಸರ್ಕಲ್‌ನಲ್ಲಿ ಅದು ಸಿಸಿಟಿವಿ ಇರೋ ಪ್ರದೇಶದಲ್ಲೇ ಏಕೆ ನಿಲ್ಲುತ್ತಿದ್ದೆವು ಎಂದು ಹೇಳಿದ್ದಾರೆ.