ಇದು ಇಂಟರ್‌ನೆಟ್ ಯುಗ, ಸೋಶಿಯಲ್ ಮೀಡಿಯಾಗಳು ಈಗ ಬಹುತೇಕರ ಬದುಕಿನ ಭಾಗವಾಗಿರುವುದಂತು ಸತ್ಯ. ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಕಷ್ಟು ಆಯ್ಕೆಗಳು ಬಳಕೆದಾರರ ಮುಂದಿವೆ. ಇದೀಗ ಮತ್ತೊಂದು ಅಪ್ಲಿಕೇಷನ್ ಇಂಟರ್‌ನೆಟ್ ಬಳಕೆದಾರರಿಗೆ ಲಭ್ಯವಾಗಿದೆ. ಫೇಸ್‌ಬುಕ್‌ನ ಪೋಷಕ ಸಂಸ್ಥೆಯಾದ ಮೆಟಾ ಈ ಸಿದ್ಧತೆ ಮಾಡಿದೆ. ಎಲೋನ್ ಮಸ್ಕ್ ಟ್ವಿಟ್ಟರ್ ಮಾಲಿಕತ್ವ ವಹಿಸಿಕೊಂಡ ಬಳಿಕ ಸಾಕಷ್ಟು ಬದಲಾವಣೆಯಾಗಿತ್ತು. ಈ ತ್ವರಿತ ಬದಲಾವಣೆಗಳಿಗೆ ಕೆಲವರು ಒಗ್ಗಿಕೊಂಡರೆ, ಇನ್ನೊಂದಷ್ಟು ಮಂದಿ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಶುಲ್ಕ ಪಾವತಿಸದ ಬಳಕೆದಾರರು ವೀಕ್ಷಿಸಬಹುದಾದ ಟ್ವೀಟ್‌ಗಳ ಸಂಖ್ಯೆಗೆ ಇತ್ತೀಚೆಗೆ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಮಿತಿ ಹಾಕಿದೆ. ಇದರ ಜತೆಗೆ ಹೊಸ ಟ್ವೀಟ್‌ಡೆಕ್ ಅನ್ನು ಕೂಡಾ ಪೇವಾಲ್‌ನಡಿಗೆ ತಂದಿದೆ. ಇವೆಲ್ಲಾ ಬಳಕೆದಾರರು ಟ್ವಿಟ್ಟರ್ ಹೊರತಾಗಿ ಹೊಸ ಆಯ್ಕೆಗಳನ್ನು ಹುಡುಕುವಂತೆ ಮಾಡಿದೆ. ಈ ಅವಕಾಶದ ಲಾಭವನ್ನು ಪಡೆಯಲು ಮೆಟಾ ಸನ್ನದ್ಧವಾಗಿದೆ. ಇದೇ ಕಾರಣದಿಂದ ಟ್ವಿಟ್ಟರ್‌ಗೆ ಪರ್ಯಾಯವಾಗಿ ಥ್ರೆಡ್ಸ್ ಎಂಬ ಹೊಸ ಆಪ್ಲಿಕೇಷನ್ ಅನ್ನು ಘೋಷಿಸಿದೆ ಇನ್‌ಸ್ಟಾಗ್ರಾಮ್‌ಗೆ ಸಂಪರ್ಕಗೊಂಡಿರುವ ಥ್ರೆಡ್ಸ್ ಅಪ್ಲಿಕೇಶನ್, ಅದರ ಅಧಿಕೃತ ಬಿಡುಗಡೆಯ ಮೊದಲು ಆಪಲ್ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಕಾಣಿಸಿಕೊಂಡಿದೆ. ಜುಲೈ 6 ರಂದು ಥ್ರೆಡ್ಸ್ ಅಪ್ಲಿಕೇಷನ್ ಆರಂಭವಾಗಿದೆ. ಹಾಗೂ ಆ್ಯಪ್ ಸ್ಟೋರ್ ಲಿಸ್ಟಿಂಗ್‌ನಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಆಸಕ್ತಿ ಬಳಕೆದಾರರಿಗೆ ಅಪ್ಲಿಕೇಷನ್ ಆರಂಭವಾದ ತಕ್ಷಣ ನೋಟಿಫಿಕೇಷನ್ ಪಡೆಯುವಂತಹ ಆಯ್ಕೆಯನ್ನೂ ನೀಡಲಾಗಿದೆ. ನೀವು ಐಫೋನ್ ಬಳಕೆದಾರರಾಗಿದ್ದರೆ, ನೀವು ಆ್ಯಪ್ ಸ್ಟೋರ್‌ಗೆ ಹೋಗಬಹುದು ಮತ್ತು ಥ್ರೆಡ್ಸ್ ಇನ್‌ಸ್ಟಾಗ್ರಾಂ ಅಪ್ಲಿಕೇಶನ್ ಅನ್ನು ಪರಿಶೀಲಿಸಬಹುದು. ಅಪ್ಲಿಕೇಶನ್ ಅನ್ನು ಆ್ಯಪ್ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಪಟ್ಟಿಯ ಪ್ರಕಾರ, ಇದು ಜುಲೈ 6 ರಂದು ಲಭ್ಯವಿರುತ್ತದೆ. ಥ್ರೆಡ್ಸ್ ಟ್ವಿಟರ್‌ನಂತೆಯೇ ಕಾರ್ಯನಿರ್ವಹಿಸುತ್ತದೆ.

ಇನ್‌ಸ್ಟಾಗ್ರಾಂ ಬಳಕೆದಾರರು ಥ್ರೆಡ್ಸ್ ಮೂಲಕ ಖಾತೆಗಳಿಗೆ ಲಾಗಿನ್ ಆಗಲು ಅವಕಾಶವಿದೆ. ಅದೇ ಯೂಸರ್ ನೇಮ್‌ನಲ್ಲೇ ಖಾತೆಯನ್ನು ಮುಂದುವರಿಯಬಹುದು. ಇನ್ಸ್ಟಾಗ್ರಾಮ್ ಮೂಲಕ ಥ್ರೆಡ್ ಕುರಿತು ಕೆಲ ಬಳಕೆದಾರರಿಗೆ ನೋಟಿಫಿಕೇಷನ್ ಈಗಾಗಲೇ ನೀಡಿದೆ.