ಬೆಂಗಳೂರು: ಪ್ರಿಯಕರನ ಜೊತೆಗೂಡಿ ಗಂಡನನ್ನು ಕೊಲೆ ಮಾಡಿಸಿದ್ದ ಹೆಂಡತಿ ಸೇರಿ ಐವರು ಆರೋಪಿಗಳನ್ನು ತಲಘಟ್ಟಪುರ (Talaghatapura) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಂಜಿತಾ, ಆಕೆಯ ಪ್ರಿಯಕರ ಗಣೇಶ್, ಶಿವಾನಂದ, ದೀಪು, ಶರತ್ ಎಂದು ಗುರುತಿಸಲಾಗಿದೆ. ಇನ್ನೂ ಆರೋಪಿ ಗಣೇಶ್ ಮೃತ ಅರುಣ್‍ಗೆ ಫೈನಾನ್ಸ್ ಕೂಡ ಕೊಡಿಸಿದ್ದ ಎಂಬ ವಿಚಾರ ತಿಳಿದು ಬಂದಿದೆ. ಕಳೆದ ವಾರ ತಲಘಟ್ಟಪುರದ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ ಎಸೆದು ಹೋಗಿದ್ದರು. ವ್ಯಕ್ತಿಯ ಗುರುತು ಸಿಗದಂತೆ ಹಲ್ಲೆ ನಡೆಸಲಾಗಿತ್ತು. ಇದರಿಂದಾಗಿ ಆತನ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ ಒಂದು ದಿನ ಬೇಕಾಗಿತ್ತು. ಬಳಿಕ ಪೊಲೀಸರು ಕೊಲೆಯಾದ ವ್ಯಕ್ತಿಯನ್ನು ಆರ್‍ಆರ್ ನಗರದ ಗೌಡ್ರು ಬಾಡೂಟ ಎಂಬ ಹೋಟೆಲ್ ನಡೆಸುತ್ತಿದ್ದ ಅರುಣ್ ಎಂದು ಗುರುತಿಸಿದ್ದರು. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಾಗ ಕೊಲೆಯಾದ ಅರುಣ್ ಹೆಂಡತಿ ಹಾಗೂ ಆರೋಪಿ ಗಣೇಶ್ ನಡುವಿನ ಸಂಬಂಧದ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಇಬ್ಬರನ್ನೂ ವಿಚಾರಣೆ ನಡೆಸಿದಾಗ, ಗಣೇಶ್ ಹೊಟೇಲ್‍ಗೆ ನೀರಿನ ಕ್ಯಾನ್ ಸರಬರಾಜು ಮಾಡುತ್ತಿದ್ದ. ಈ ವೇಳೆ ರಂಜಿತಾ ಹಾಗೂ ಗಣೇಶ್ ನಡುವೆ ಸಂಬಂಧ ಬೆಳೆದಿತ್ತು. ಈ ವಿಚಾರ ತಿಳಿದ ಅರುಣ್ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದರಿಂದಾಗಿ ಆತನನ್ನು ಆರೋಪಿಗಳು ಸಂಚು ರೂಪಿಸಿ ಕೊಲೆಗೈದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.