ನಟ ಧನುಷ್ (Dhanush) ಅವರು ಕಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಪ್ರತಿ ಸಿನಿಮಾದಲ್ಲಿ ಅವರು ವಿಶೇಷವಾದ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ಅವರು ‘ಕ್ಯಾಪ್ಟನ್ ಮಿಲ್ಲರ್’ (Captain Miller) ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ನಡುವೆ ಅವರ ಹೊಸ ಲುಕ್ ವೈರಲ್ ಆಗಿದೆ. ಧನುಷ್ ಅವರು ತಲೆ ಬೋಳಿಸಿಕೊಂಡಿದ್ದಾರೆ. ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತಿರುಪತಿ ತಿಮ್ಮಪ್ಪನ (Tirupati Temple) ದರ್ಶನ ಪಡೆದಿರುವ ಅವರು ಮುಡಿ ಕೊಟ್ಟಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಒಂದಷ್ಟು ಪ್ರಶ್ನೆಗಳು ಮೂಡಿವೆ. ಇದು ಧನುಷ್ ಅವರ ಮುಂಬರುವ ಸಿನಿಮಾಗೆ ನಡೆಯುತ್ತಿರುವ ತಯಾರಿ ಎಂದು ಕೆಲವರು ಊಹಿಸಿದ್ದಾರೆ. ಹೊಸ ಸಿನಿಮಾದಲ್ಲಿ ಧನುಷ್ ಗೆಟಪ್ ಹೀಗೆಯೇ ಇರಲಿದೆ ಎಂದು ಒಂದಷ್ಟು ಮಂದಿ ಊಹಿಸುತ್ತಿದ್ದಾರೆ. ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಧನುಷ್ ಅವರಿಗೆ ರಗಡ್ ಗೆಟಪ್ ಇದೆ. ಉದ್ದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡು ಅವರು ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಫಸ್ಟ್ ಲುಕ್ ವೈರಲ್ ಆಗಿತ್ತು. ಅಲ್ಲದೇ ಈ ಹಿಂದೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಬಿಯರ್ಡ್ ಲುಕ್ ಗಮನ ಸೆಳೆದಿತ್ತು. ಈಗ ಏಕಾಏಕಿ ಅವರು ಆ ಗೆಟಪ್ಗೆ ಮುಕ್ತಿ ನೀಡಿದ್ದಾರೆ. ಸಂಪೂರ್ಣ ಬೋಳು ತಲೆ ಮಾಡಿಕೊಂಡು ಬಂದಿದ್ದಾರೆ. ಧನುಷ್ ಅವರು 50ನೇ ಚಿತ್ರದ ತಯಾರಿಯಲ್ಲಿದ್ದಾರೆ. ಇದನ್ನು ತಾತ್ಕಾಲಿಕವಾಗಿ ‘ಡಿ50’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾ ಸಲುವಾಗಿಯೇ ಅವರು ತಲೆ ಬೋಳಿಸಿಕೊಂಡಿದ್ದಾರೆ ಎಂಬುದು ಕೆಲವರ ಊಹೆ. ಆದರೆ ಈ ಬಗ್ಗೆ ಧನುಷ್ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಧನುಷ್ ಅವರು ತಿರುಪತಿಗೆ ಭೇಟಿ ನೀಡಿದ ವೇಳೆ ಅವರ ಮಕ್ಕಳಾದ ಯಾತ್ರ, ಲಿಂಗ ಹಾಗೂ ಪೋಷಕರಾದ ಕಸ್ತೂರಿ ರಾಜ ಮತ್ತು ವಿಜಯಲಕ್ಷ್ಮೀ ಕೂಡ ಜೊತೆಗಿದ್ದರು. ಧನುಷ್ ಅವರ ‘ಡಿ50’ ಸಿನಿಮಾಗೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಲಿದೆ. ಮುಖ್ಯಭೂಮಿಕೆಯಲ್ಲಿ ನಟಿಸುವುದರ ಜೊತೆಗೆ ಧನುಷ್ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಸದ್ಯಕ್ಕೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆ ಸಿನಿಮಾದಲ್ಲಿ ಧನುಷ್ ಜೊತೆ ಶಿವರಾಜ್ಕುಮಾರ್ ನಟಿಸಿದ್ದಾರೆ. ಹಾಗಾಗಿ ಕನ್ನಡಿಗರು ಕೂಡ ‘ಕ್ಯಾಪ್ಟನ್ ಮಿಲ್ಲರ್’ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
