ಪ್ಯಾರಿಸ್, ಫ್ರಾನ್ಸ್: 17 ವರ್ಷದ ಬಾಲಕನ ಹತ್ಯೆಯಿಂದ ಫ್ರಾನ್ಸ್ (France) ದೇಶ ಧಗ ಧಗ ಹೊತ್ತಿ ಉರಿಯುತ್ತಿದೆ. 17 ವರ್ಷದ ವಲಸಿಗ ಬಾಲಕ ನಹೆಲ್ (Nahel) ಎಂಬಾತನ ಸಾವಿನಿಂದ ಫ್ರಾನ್ಸ್‌ನಲ್ಲಿ ಗಲಾಟೆ ಶುರುವಾಗಿದೆ. ಟ್ರಾಫಿಕ್ ನಿಲುಗಡೆಯ ಸಮಯದಲ್ಲಿ ನಾಂಟೆರ್ರೆಯಲ್ಲಿ ಫ್ರೆಂಚ್ ಪೋಲೀಸ್ (French police) ಅಧಿಕಾರಿಯೊಬ್ಬರು ಬಾಲಕ ನಹೆಲ್‌ಗೆ ಕಾರು (car) ನಿಲ್ಲಿಸುವಂತೆ ಸೂಚಿಸಿದ್ದಾರೆ. ಆತ ಕಾರು ನಿಲ್ಲಿಸದೇ ಹೋದಾಗ ಪೊಲೀಸ್ ಅಧಿಕಾರಿ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಹೀಗಾಗಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಇದರಿಂದಾಗಿ ಉಂಟಾದ ಗಲಾಟೆ, ಇದೀಗ ದೇಶವ್ಯಾಪಿ ಹಬ್ಬಿದೆ. ದೇಶಾದ್ಯಂತ ಪ್ರತಿಭಟನೆ (nationwide protest) ಇಂದು 4ನೇ ದಿನಕ್ಕೆ ಕಾಲಿಟ್ಟಿದೆ. ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ದಂಗೆಕೋರರು ಗಲಾಟೆ ನಡೆಸುತ್ತಿದ್ದಾರೆ. ಹಲವೆಡೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಪ್ಯಾರಿಸ್‌ನ ಉಪನಗರವಾದ ನಾಂಟೆರೆಸ್‌ನಲ್ಲಿ ಅಲ್ಜೀರಿಯನ್ ಮೂಲದ ನಹೆಲ್ ಎಂಬ 17 ವರ್ಷದ ಹದಿಹರೆಯದ ಬಾಲಕನ ಹತ್ಯೆಯಿಂದ ಪರಿಸ್ಥಿತಿ ಬಿಗಡಾಯಿಸಿದೆ. ಫ್ರೆಂಚ್ ಸರ್ಕಾರವು ಪರಿಸ್ಥಿತಿ ಕಂಟ್ರೋಲ್ ಮಾಡಲು ಹೆಣಗಾಡುತ್ತಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಸುಮಾರು 45,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.