ಮಡಿಕೇರಿ : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳು ಭಾಗವಹಿಸಿದ್ದವು, ಇದರಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಬಹುಮಾನ ಲಭಿಸಿದೆ.
“ಕೈಬೀಸಿ ಕರೆಯುತ್ತಿದೆ ಕೊಡಗೆಂಬ ಬೆಡಗು”

ಈ ನಾಡಿನ ಜೀವನದಿ ಕಾವೇರಿಯ ತವರು ನೆಲ ಕೊಡಗು. ಹಸಿರು ವನಸಿರಿಯಿಂದ ಕಂಗೊಳಿಸುವ ಕೊಡಗನ್ನು ‘ದಕ್ಷಿಣದ ಕಾಶ್ಮೀರ’ ವೆಂದೂ ಹಾಗೂ ‘ಸ್ಕಾಟ್ ಲ್ಯಾಂಡ್ ಆಫ್ ಇಂಡಿಯಾ’ ಎಂತಲೂ ಕರೆಯಲ್ಪಡುತ್ತದೆ. ಪಶ್ಚಿಮಘಟ್ಟದ ಬ್ರಹ್ಮಗಿರಿ ತಪ್ಪಲಿನಿಂದ ಉದ್ಭವವಾಗುವ ಕಾವೇರಿಯ ಉಗಮಸ್ಥಾನ ತಲಕಾವೇರಿ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ, ಪಾಡಿ ಶ್ರೀ ಇಗ್ಗುತಪ್ಪ ದೇವಾಲಯ ಮುಂತಾದ ಪುಣ್ಯ ಕ್ಷೇತ್ರಗಳಿವೆ. ಪುಷ್ಪಗಿರಿ, ತಡಿಯಂಡ ಮೋಳ್ ಮುಂತಾದ ಬೆಟ್ಟಗಳ ಸಾಲು ಕಂಗೊಳಿಸುತ್ತಿರುವ ಕೊಡಗು ಜಿಲ್ಲೆಯಲ್ಲಿ ಇರ್ಪು ಜಲಪಾತ, ಮಲ್ಲಳ್ಳಿ ಜಲಪಾತ ಸೇರಿದಂತೆ ಅನೇಕ ಜಲಪಾತಗಳು ಕಣ್ಮನ ಸೆಳೆಯುತ್ತವೆ. ಘಮಘಮಿಸುವ ಕೊಡಗಿನ ಕಾಫಿ ಲೋಕ ಜಗತ್ ಪ್ರಸಿದ್ದ. ಕೊಡಗಿನ ಕಿತ್ತಳೆಯ ಅನುಪಮ ಸ್ವಾದಕ್ಕೆ ಮನಸೋಲದವರಿಲ್ಲ. ರುಚಿಕರ ಕೊಡಗಿನ ಜೇನು ಪ್ರಕೃತಿಯ ಕೊಡುಗೆ. ನಿತ್ಯ ಹರಿದ್ವರ್ಣದ ಕೊಡಗಿನ ವನಸಿರಿ ದೈವದತ್ತವಾದುದು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯರಂಥ ವೀರ ಸೇನಾನಿಗಳ ನಾಡಿನಲ್ಲಿ ದೇಶ ಕಾಯುವ ಅನೇಕ ಯೋಧರಿದ್ದಾರೆ. ಸಸ್ಯ ಸಂಪತ್ತು, ಜೀವ ವೈವಿಧ್ಯತೆಗಳ ಈ ಜಿಲ್ಲೆಯಲ್ಲಿ ಇದೀಗ ಪ್ರವಾಸೋದ್ಯಮ ಬೆಳೆಯುತ್ತಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಡಗಿನ ಗ್ರಂಥಾಲಯ ವ್ಯವಸ್ಥೆ ಡಿಜಿಟಲೀಕರಣಗೊಂಡು ಆಧುನಿಕತೆಯತ್ತ ಹೆಜ್ಜೆಯಿಟ್ಟಿದೆ.ಬೆಡಗಿನ ಕೊಡಗಿಗೆ ನಿಮಗಿದೋ ಸ್ವಾಗತ!