ಕೋಲಾರ(ಜೂ.28): ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆಯ ಬೋಡಗುರ್ಕಿ ಗ್ರಾಮದಲ್ಲಿ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದ್ದು, ಮರ್ಯಾದೆಗೆ (Honor Killing) ಹೆದರಿದ ತಂದೆಯೊಬ್ಬ ಮಗಳನ್ನೇ ಕೊಲೆಗೈದಿದ್ದಾನೆ. ಹೌದು ಮಗಳು ತಮಗಿಂತ ಕೆಳ ಜಾತಿಯ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದ ತಂದೆ ಇದರಿಂದ ತಮ್ಮ ಮರ್ಯಾದೆ ಕಳೆದು ಹೋಗುತ್ತದೆ ಎಂಬ ಭಯದಿಂದ ಆಕೆಯನ್ನು ಕೊಲೆಗೈದಿದ್ದಾನೆ. ಇನ್ನು ಪ್ರೇಯಸಿ ನಿಧನದ (Death) ಸುದ್ದಿಯಿಂದ ಆಘಾತಕ್ಕೀಡಾದ ಆಕೆಯ ಪ್ರಿಯಕರನೂ ಅತ್ಮಹತ್ಯೆಗೆ ಶರಣಾಗಿದ್ದಾನೆ. ಕೀರ್ತಿ ಹಾಗೂ ಗಂಗಾಧರ್ ಎಂಬವರು ಕಳೆದೆರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಈ ಪ್ರೀತಿಗೆ ಜಾತಿ ವಿಚಾರ ಅಡ್ಡಿಯಾಗಿದೆ. ಕಳೆದ ಸೋಮವಾರ ಕೀರ್ತಿ ತಂದೆ ಕೃಷ್ಣಮೂರ್ತಿ ಬಳಿ ಗಂಗಾಧರ್ ಮದುವೆ ಮಾಡಿಕೊಡುವ ಬಗ್ಗೆ ಪ್ರಸ್ತಾಪವಿಟ್ಟಿದ್ದಾನೆ. ಆದರೆ ಗಂಗಾಧರ್ ಪರಿಶಿಷ್ಟ ಜಾತಿಗೆ ಸೇರಿದ್ದು, ಯುವತಿ ಕೀರ್ತಿ ಸಾಮಾನ್ಯ ವರ್ಗಕ್ಕೆ ಸೇರಿದ್ದಳು. ಹೀಗಿರುವಾಗ ಈ ಮದುವೆ ನಡೆದರೆ ತನ್ನ ಮರ್ಯಾದೆಗೆ ಧಕ್ಕೆಯಾಗುತ್ತದೆ ಎಂಬ ಭೀತಿಯಲ್ಲಿ ತಂದೆ ಅಂದು ಮಗಳನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ.