ಚಿತ್ರರಂಗದಲ್ಲಿ ನಟ ರವಿ ಕಿಶನ್ (Ravi Kishan) ಅವರು ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆ ಮಾತ್ರವಲ್ಲ ರಾಜಕಾರಣದಲ್ಲೂ ಸಕ್ರಿಯರಾಗಿದ್ದಾರೆ. ಹೀಗಿರುವಾಗ, ಮಗಳ ನಡೆ ಬಗ್ಗೆ ಹೆಮ್ಮೆಯಿಂದ ‘ಹೆಬ್ಬುಲಿ’ ಖಳನಟ ರವಿ ಕಿಶನ್ ಮಾತನಾಡಿದ್ದಾರೆ. ಭಾರತೀಯ ಸೇನೆಗೆ (Defence Force)ರವಿ ಕಿಶನ್ ಪುತ್ರಿ ಇಶಿತಾ ಶುಕ್ಲಾ (Ishita Shukla) ಸೇರಿದ್ದಾರೆ. ಬಾಲಿವುಡ್ ನಟ ರವಿ ಕಿಶನ್ ಅವರು ಕನ್ನಡದ ‘ಹೆಬ್ಬುಲಿ’ (Hebbuli Film) ಚಿತ್ರದಲ್ಲಿ ಸುದೀಪ್ (Kiccha Sudeep) ಮುಂದೆ ಅಬ್ಬರಿಸಿ ಗಮನ ಸೆಳೆದಿದ್ದರು. ದ್ರೋಣ, ಶಿವಾರ್ಜುನ, ರಾಬರ್ಟ್ ಚಿತ್ರದಲ್ಲಿಯೂ ರವಿ ಕಿಶನ್ ನಟಿಸಿದ್ದಾರೆ. ಹಿಂದಿ, ಭೋಜಪುರಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲು ಅರ್ಜುನ್ (Allu Arjun)ಅಭಿನಯದ ಸೂಪರ್ ಹಿಟ್ ಸಿನಿಮಾ ‘ರೇಸ್ ಗುರಂ’ ಚಿತ್ರದಲ್ಲಿ ಅವರು ಮಾಡಿದ ವಿಲನ್ ಪಾತ್ರ ಸಾಕಷ್ಟು ಗಮನ ಸಳೆಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಗೆದ್ದು ಸಂಸದರಾಗಿದ್ದಾರೆ. ಪ್ರಸ್ತುತ ರವಿ ಕಿಶನ್ ಮಗಳು ಇಶಿತಾ ಸೇನೆಗೆ ಸೇರಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಅಗ್ನಿಪಥ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಇಶಿತಾ ಭಾರತೀಯ ಸೇನೆ ಸೇರಿದ್ದಾರೆ. ಇದನ್ನು ರವಿ ಕಿಶನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಶಿತಾಗೆ ಈಗ ಕೇವಲ 21 ವರ್ಷ. ದೇಶ ಸೇವೆ ಮಾಡುವ ಅವಕಾಶ ಇಶಿತಾಗೆ ಸಿಕ್ಕಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅಥವಾ ಬ್ಯುಸಿನೆಸ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಪುತ್ರಿ ಇಶಿತಾ ಕನಸಿಗೆ ರವಿ ಕಿಶನ್ ಬೆಂಬಲಿಸಿದ್ದಾರೆ. ಒಟ್ನಲ್ಲಿ ಇಶಿತಾ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 1993ರಲ್ಲಿ ಪ್ರೀತಿ ಎಂಬುವರ ಜೊತೆ ರವಿ ಕಿಶನ್ ಮದುವೆಯಾದರು. ಒಬ್ಬ ಮಗ ಮತ್ತು ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಅದರಲ್ಲಿ ರಿವಾ ಕಿಶನ್ ಶುಕ್ಲಾ ಎಂಬ ಪುತ್ರಿ 2020ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ‘ಸಬ್ ಕುಶಲ್ ಮಂಗಲ್’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.