ನಿನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ‘ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ತಮಿಳಿನ ಹೆಸರಾಂತ ನಟ ಕಮಲ್ ಹಾಸನ್ ನಟಿಸುತ್ತಿರುವ ವಿಷಯ ಅಧಿಕೃತವಾಗಿಯೇ ಬಹಿರಂಗವಾಗಿತ್ತು. ತಮ್ಮ ಸಿನಿಮಾದಲ್ಲಿ ಕಮಲ್ ನಟಿಸುತ್ತಿರುವ ಕುರಿತು ಅಧಿಕೃತ ಮಾಹಿತಿಯನ್ನೇ ನಿರ್ಮಾಣ ಸಂಸ್ಥೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿತ್ತು. ಪ್ರಾಜೆಕ್ಟ್ ಕೆ (Project K) ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬಿದ್ದು, ‘ಇವರು ಲೆಜೆಂಡ್. ಈ ಪಾತ್ರವು ಯಾರನ್ನು ನಿರೀಕ್ಷೆ ಮಾಡುತ್ತಿತ್ತೋ ಅವರು ನಮಗೆ ಸಿಕ್ಕಿದ್ದಾರೆ. ಕಮಲ್ ಹಾಸನ್ (Kamal Haasan) ಅವರಿಂದ ನಾನು ಸಾಕಷ್ಟು ಕಲಿಯಬಹುದು. ಆ ಕ್ಷಣಕ್ಕಾಗಿ ನಾನಂತೂ ಕಾಯುತ್ತಿದ್ದೇನೆ’ ಎಂದು ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಹೇಳಿಕೊಂಡಿದ್ದರು. ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ ಎಂದು ಅಧಿಕೃತ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ ಅವರು ಆ ಸಿನಿಮಾಗಾಗಿ ಎಷ್ಟು ಸಂಭಾವನೆ (Remuneration) ಪಡೆದಿದ್ದಾರೆ ಎನ್ನುವ ವಿಚಾರವೂ ಚರ್ಚೆಯಾಗುತ್ತಿದೆ. ಕಮಲ್ ಹಾಸನ್ ಅವರ ಆಪ್ತರು ಹೇಳುವ ಪ್ರಕಾರ ಈ ಚಿತ್ರಕ್ಕಾಗಿ ಕಮಲ್ ಬರೋಬ್ಬರಿ 100 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಅಧಿಕೃತ ಮಾಹಿತಿ ಅಲ್ಲ.