ಉಡುಪಿ: ಕಸದ ಜೊತೆ ಬಂದಿದ್ದ ಬಂಗಾರದ ಉಂಗುರವನ್ನು (Gold Ring) ಸ್ವಚ್ಛತಾ ಘಟಕದ (Cleaning Staff) ಸಿಬ್ಬಂದಿಯೋರ್ವರು ಅದರ ವಾರಸುದಾರರಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಉಡುಪಿಯಲ್ಲಿ ವರದಿಯಾಗಿದೆ. ಇನ್ನೇನು ಉಂಗುರ ಹೋಗೇ ಬಿಡ್ತು ಅಂತಾ ಧೈರ್ಯವೇ ಕಳೆದುಕೊಂಡಿದ್ದವರಿಗೆ ಸ್ವಚ್ಛತಾ ಸಿಬ್ಬಂದಿ ನೀಡಿದ ಸುದ್ದಿಯೊಂದು ಮತ್ತೆ ಮುಖದಲ್ಲಿ ನಗು ಮೂಡುವಂತೆ ಮಾಡಿದೆ. ಈ ಮೂಲಕ ಸ್ವಚ್ಛತಾ ಸಿಬ್ಬಂದಿಯ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಉಡುಪಿಯತ ಬೈಂದೂರು ತಾಲೂಕಿನ ಶಂಕರನಾರಾಯಣ ಗ್ರಾಮಪಂಚಾಯತ್ ವ್ಯಾಪ್ತಿಯ ವ್ಯಕ್ತಿಯೋರ್ವರು ತನ್ನ 2 ಗ್ರಾಂ ತೂಕದ ಬಂಗಾರದ ಉಂಗುರವನ್ನು ಕಳೆದುಕೊಂಡಿದ್ದರು. ಮನೆಯಲ್ಲಿ ಎಷ್ಟೇ ಹುಡುಕಾಡಿದರೂ ಉಂಗುರ ಮಾತ್ರ ಸಿಕ್ಕಿರಲಿಲ್ಲ. ಇನ್ನೇನು ಪಂಚಾಯತ್ ನಿಂದ ಬರುವ ಕಸ ಸಂಗ್ರಹಗಾರರಿಗೂ ಈ ವಿಷಯ ತಿಳಿಸಿದ್ದರು. ತನ್ನ ಬಂಗಾರದ ಉಂಗುರ ಸಿಕ್ಕರೆ ತಿಳಿಸುವಂತೆ ಮನವಿ ಮಾಡಿದ್ದರು. ಅದರಂತೆ ಬೈಲೂರು ಮೂಡುಬೈಲೂರಿನಲ್ಲಿ ಎಸ್‌ಎಲ್‌ಆರ್‌ಎಂಘಟಕದಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡುವ ಸಮಯದಲ್ಲಿ ಚಿನ್ನದ ಹೊಳಪಿನ ವಸ್ತುವೊಂದು ಕಣ್ಣಿಗೆ ಗೋಚರಿಸಿದ್ದೇ, ಸ್ವಚ್ಛತಾ ಸಿಬ್ಬಂದಿ ದೇವಕಿ ಅವರು ಚುರುಕು ಆಗಿದ್ದಾರೆ. ಕೂಡಲೇ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾ ಉಂಗುರವನ್ನು ಹೊರ ತೆಗೆದಿದ್ದಾರೆ. ತಕ್ಷಣ, ಅದರ ವಾರಸುದಾರರಿಗೆ ಮಾಹಿತಿ ನೀಡಿ ಉಂಗುರವನ್ನು ಮರಳಿಸಿದ್ದಾರೆ. ದೇವಕಿ ಅವರ ಈ ಪ್ರಾಮಾಣಿಕತೆಗೆ ಉಂಗುರು ಕಳೆದುಕೊಂಡಿದ್ದ ವ್ಯಕ್ತಿ, ಪಂಚಾಯತ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.