ರಣ್ಬೀರ್ ಕಪೂರ್, ಅಲಿಯಾ ಅಭಿನಯಿಸಲಿರುವ ಸಿನಿಮಾದಲ್ಲಿ ರಾವಣನ ಪಾತ್ರವನ್ನು ತಿರಸ್ಕರಿಸಿದ ಯಶ್​; ಒಳ್ಳೆಯದೇ ಆಯ್ತು- ಟ್ವಿಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡ ಫ್ಯಾನ್ಸ್​ – ಕರುನಾಡ ನ್ಯೂಸ್


ಬಾಲಿವುಡ್​ನಲ್ಲಿ ಖ್ಯಾತ ನಿರ್ದೇಶಕ ನಿತೇಶ್​ ತಿವಾರಿ (Nitesh Tiwari) ಅವರು ಆ್ಯಕ್ಷನ್​-ಕಟ್​ ಹೇಳಲಿರುವ ರಾಮಾಯಣ (Ramayana) ಆಧಾರಿತ ಸಿನಿಮಾ ಬಗ್ಗೆ ಹತ್ತಾರು ಗಾಸಿಪ್​ಗಳು ಹರಿದಾಡುತ್ತಿವೆ. ಈ ಸಿನಿಮಾಗೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಸೀತೆ ಪಾತ್ರದಲ್ಲಿ ಆಲಿಯಾ ಭಟ್​ ಹಾಗೂ ರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ ನಟಿಸುತ್ತಾರೆ ಎನ್ನಲಾಗುತ್ತಿದೆ. ಅದೇ ರೀತಿ ರಾವಣನ ಪಾತ್ರವನ್ನು ಯಶ್​ (Yash) ಅವರಿಗೆ ನೀಡಲಾಗುವುದು ಎಂಬ ಸುದ್ದಿ ಕೂಡ ಹರಿದಾಡಿತ್ತು. ಆದರೆ ಆ ಪಾತ್ರವನ್ನು ಮಾಡಲು ಯಶ್​ ಒಪ್ಪಿಕೊಂಡಿಲ್ಲ ಎಂದು ಈಗ ಹೊಸ ಮಾಹಿತಿ ಕೇಳಿಬಂದಿದೆ. ‘ರಾಕಿಂಗ್​ ಸ್ಟಾರ್​’ ಅವರು ರಾವಣನ ಪಾತ್ರವನ್ನು ತಿರಸ್ಕರಿಸಿದ್ದು ಒಳ್ಳೆಯದೇ ಆಯಿತು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಟ್ವಿಟರ್​ನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.ಯಶ್​ ಅವರು 19ನೇ ಸಿನಿಮಾ ಅನೌನ್ಸ್​ ಮಾಡುವುದು ಬಾಕಿ ಇದೆ. ‘ಕೆಜಿಎಫ್​: ಚಾಪ್ಟರ್​ 2’ ಬಳಿಕ ಅವರು ಹೊಸ ಸಿನಿಮಾ ಘೋಷಿಸಿಲ್ಲ. ಆದಷ್ಟು ಬೇಗ ಈ ಬಗ್ಗೆ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಈಗ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಇಂಥ ಸಂದರ್ಭದಲ್ಲಿ ಅವರು ನೆಗೆಟಿವ್​ ಪಾತ್ರ ಮಾಡುವುದು ಸರಿಯಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ. ಅದಕ್ಕೆ ಅನುಗುಣವಾಗಿಯೇ ಯಶ್​ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಿತೇಶ್​ ತಿವಾರಿ ಅವರ ರಾಮಾಯಣ ಆಧಾರಿತ ಸಿನಿಮಾ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಪಾತ್ರವರ್ಗದ ಆಯ್ಕೆ ಬಗ್ಗೆ ಕೇಳಿಬಂದ ಗಾಸಿಪ್​ ಕುರಿತು ಸೆಲೆಬ್ರಿಟಿಗಳು ಕೂಡ ಮಾತನಾಡುತ್ತಿದ್ದಾರೆ. ಯಶ್​ಗೆ ರಾವಣನ ಪಾತ್ರದ ಆಫರ್​ ನೀಡಲಾಗಿದೆ ಎಂಬ ಸುದ್ದಿ ಕೇಳಿ ಇತ್ತೀಚೆಗೆ ಕಂಗನಾ ರಣಾವತ್​ ಅವರು ಗರಂ ಆಗಿದ್ದರು. ಯಾವುದೇ ಹೆಸರನ್ನು ಪ್ರಾಸ್ತಪಿಸದೇ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ರಣಬೀರ್​ ಕಪೂರ್​ಗೆ ರಾಮನ ಪಾತ್ರ ನೀಡಿ, ಯಶ್​ಗೆ ರಾವಣನ ಪಾತ್ರ ನೀಡುವುದು ಕಿಂಚಿತ್ತೂ ಸರಿಯಲ್ಲ ಎಂಬ ಅರ್ಥಬರುವ ಹಾಗೆ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅವರು ಬರೆದುಕೊಂಡಿದ್ದರು. ‘ದಕ್ಷಿಣದ ಯುವ ಸೂಪರ್​ ಸ್ಟಾರ್​ ಒಬ್ಬರು ಫ್ಯಾಮಿಲಿ ಮ್ಯಾನ್​ ರೀತಿ ಗುರುತಿಸಿಕೊಂಡಿದ್ದಾರೆ. ಎಲ್ಲ ರೀತಿಯಿಂದಲೂ ಅವರು ರಾಮನ ರೀತಿ ಕಾಣುತ್ತಾರೆ. ಅಂಥವರಿಗೆ ಹೋಗಿ ರಾವಣನ ಪಾತ್ರ ನೀಡುತ್ತಾರಂತೆ. ಇದು ಎಂಥ ಕಲಿಯುಗ? ಬಡಕಲು ದೇಹ ಇರುವ, ಡ್ರಗ್​ ಅಡಿಕ್ಟ್ ಆಗಿರುವಂತವನು ರಾಮನ ಪಾತ್ರ ಮಾಡಬಾರದು. ಜೈ ಶ್ರೀರಾಮ್​’ ಎಂದು ಕಂಗನಾ ರಣಾವತ್​ ಅವರು ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದರು.ಯಶ್​ ಅವರು ಯಾವ ನಿರ್ದೇಶಕರ ಜೊತೆ ಕೈ ಜೋಡಿಸುತ್ತಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಅವರ ಹೊಸ ಸಿನಿಮಾಗೆ ಬಂಡವಾಳ ಹೂಡಲಿರುವ ನಿರ್ಮಾಣ ಸಂಸ್ಥೆ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ಆದರೆ ಅನೇಕ ಗಾಳಿ ಸುದ್ದಿಗಳು ಹರಡಿರುವುದಂತೂ ನಿಜ. ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ಶ್ರೀಲಂಕಾದಲ್ಲಿ ಅನುಮತಿ ಪಡೆದಿದ್ದಾರೆ ಎಂಬ ಸುದ್ದಿ ಕೆಲವು ದಿಗಳ ಹಿಂದೆ ಕೇಳಿಬಂದಿತ್ತು.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ