ಸಾಮಾಜಿಕ-ರಾಜಕೀಯ ಕಾರ್ಯಕರ್ತರಾಗಿ ಮತ್ತು ಲೇಖಕರಾಗಿ ಜನಪ್ರಿಯರಾಗಿದ್ದ ಅರುಣ್ ಗಾಂಧಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮಂಗಳವಾರ ಅಸ್ತಂಗತರಾದರು. ಮಹಾತ್ಮ ಗಾಂಧಿ ಅವರ ಮೊಮ್ಮಗ ಅರುಣ್ ಗಾಂಧಿ (89) ಮಂಗಳವಾರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವಿಧಿವಶರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ವಯೋಸಹಜವಾಗಿ ಅಲ್ಪಕಾಲದ ಅನಾರೋಗ್ಯದಿಂದ ಅವರು ಬಳಲಿದ್ದರು.
ಸಾಮಾಜಿಕ-ರಾಜಕೀಯ ಕಾರ್ಯಕರ್ತರಾಗಿ ಮತ್ತು ಲೇಖಕರಾಗಿ ಜನಪ್ರಿಯರಾಗಿದ್ದ ಅರುಣ್ ಗಾಂಧಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ಕೊಲ್ಹಾಪುರದಲ್ಲಿ ನಡೆಯಲಿದೆ ಎಂದು ಅವರ ಪುತ್ರ ತುಷಾರ್ ಗಾಂಧಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಅರುಣ್ ಗಾಂಧಿ ಅವರು ಮಣಿಲಾಲ್ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ದಂಪತಿಯ ಪುತ್ರ. ಮಣಿಲಾಲ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ಎರಡನೇ ಮಗ. ಅರುಣ್ ಗಾಂಧಿ 14 ಏಪ್ರಿಲ್ 1934 ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಜನಿಸಿದರು. ಅವರ ತಂದೆ ಇಲ್ಲಿ ಪ್ರಕಟವಾಗುತ್ತಿದ್ದ ಇಂಡಿಯನ್ ಒಪಿನಿಯನ್ ಪತ್ರಿಕೆಯ ಸಂಪಾದಕರಾಗಿದ್ದರೆ, ಅವರ ತಾಯಿ ಅದೇ ಪತ್ರಿಕೆಯಲ್ಲಿ ಪ್ರಕಾಶಕರಾಗಿದ್ದರು. ಅರುಣ್ ಗಾಂಧಿ ನಂತರ ತಮ್ಮ ಅಜ್ಜನ ಮಾರ್ಗವನ್ನು ಅನುಸರಿಸಿದರು ಮತ್ತು ಸಾಮಾಜಿಕ-ರಾಜಕೀಯ ವಿಷಯಗಳಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿದರು. ಅರುಣ್ ಗಾಂಧಿ ಕೂಡ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ʻಗಿಫ್ಟ್ ಆಫ್ ಆಂಗರ್; ಆಂಡ್ ಅದರ್ ಲೆಸೆನ್ಸ್ ಫ್ರಂ ಮೈ ಗ್ರಾಂಡ್‌ಫಾದರ್ ಮಹಾತ್ಮ ಗಾಂಧಿ ಪ್ರಮುಖವಾಗಿವೆ. ಅರುಣ್ ಗಾಂಧಿ 1987ರಲ್ಲಿ ಕುಟುಂಬ ಸಮೇತ ಅಮೆರಿಕದಲ್ಲಿ ನೆಲೆಸಿದ್ದರು. ಇಲ್ಲಿ ಅವರು ಟೆನ್ನೆಸ್ಸೀಯ ಮೆಂಫಿಸ್‌ನಲ್ಲಿ ತಮ್ಮ ಜೀವನದ ಹಲವು ವರ್ಷಗಳನ್ನು ಕಳೆದರು. ಇಲ್ಲಿ ಅವರು ಕ್ರಿಶ್ಚಿಯನ್ ಬ್ರದರ್ಸ್ ವಿಶ್ವವಿದ್ಯಾಲಯದಲ್ಲಿ ಅಹಿಂಸೆಗೆ ಸಂಬಂಧಿಸಿದ ಸಂಸ್ಥೆಯನ್ನು ಸ್ಥಾಪಿಸಿದರು.