ಹಾಲಿ ಶಾಸಕರನ್ನು ಕೈಬಿಟ್ಟಿದ್ದೇಕೆ ಬಿಜೆಪಿ? ಗುಟ್ಟು ರಟ್ಟು ಮಾಡಿದ ಅಮಿತ್ ಶಾ – ಕರುನಾಡ ನ್ಯೂಸ್


ಕರ್ನಾಟಕ ವಿಧಾನಸಭಾ (Karnataka Assembly Elections) ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ಪಕ್ಷಗಳ ನಾಯಕರು ಜನರ ಓಲೈಕೆಗೆ ತಮ್ಮ ತಮ್ಮ ಕ್ಷೇತ್ರದಲ್ಲಿ (Constituencies), ರಾಜ್ಯದಲ್ಲಿ ಜನತೆಯತ್ತ ಒಲವು ತೋರುತ್ತಿದ್ದಾರೆ. ಮೂರು ಪಕ್ಷಗಳು ಗದ್ದುಗೆ ಏರುವ ಕನಸು ಹೊತ್ತಿದ್ದು, ತಮ್ಮದೇ ಆದ ತಂತ್ರಗಳ ಮೂಲಕ ಕಸರತ್ತು ಆರಂಭಿಸಿದ್ದಾರೆ. ಇನ್ನು ಆಡಳಿತ ಪಕ್ಷವಾಗಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಕೇಂದ್ರದ ನಾಯಕರನ್ನು ರಾಜ್ಯಕ್ಕೆ ಆಹ್ವಾನಿಸಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಬಿಜೆಪಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಚಾಣಕ್ಯ ಅಮಿತ್ ಶಾ, ಯೋಗಿ ಆದಿತ್ಯನಾಥ್ ಹೀಗೆ ಕೇಂದ್ರದ ನಾಯಕರು ರಾಜ್ಯಕ್ಕೆ ದೌಡಾಯಿಸಿ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸಲು ಶ್ರಮವಹಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಕೂಡ ಸುರ್ಜೇವಾಲಾ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮೂಲಕ ಜನತೆಯ ಮತಕ್ಕೆ ಬಲೆ ಬೀಸಿದ್ದಾರೆ. ಈ ಎಲ್ಲದರ ನಡುವೆ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಯಾಕೆ ಸ್ಥಾನ ನೀಡಿಲ್ಲ ಎಂಬುದನ್ನು ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬಿಜೆಪಿಯ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವು ಹಾಲಿ ಶಾಸಕರನ್ನು ಸೇರಿಸಿಕೊಳ್ಳದಿರುವ ವಿಚಾರವನ್ನು ಪ್ರಸ್ತಾಪಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪಕ್ಷವು ಯಾವಾಗಲೂ ಬದಲಾವಣೆಯನ್ನು ಆಶಿಸುತ್ತದೆ ಆದರೆ ಕರ್ನಾಟಕ ರಾಜ್ಯದಲ್ಲಿ ಬದಲಾವಣೆಯ ಪರ್ವ ತೀರಾ ಕಡಿಮೆ. ಇದು ಮೇ 10ರಂದು ನಡೆಯುವ ಚುನಾವಣೆ ಮೂಲಕ ಬದಲಾವಣೆ ಹವಾ ಆರಂಭವಾಗುತ್ತದೆ ಎಂದು ಹೇಳಿದ್ದಾರೆ. ಹೌದು ಬಿಜೆಪಿಯ ಕೆಲವು ಘಟಾನುಘಟಿಗಳಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರು ಈ ಬಾರಿಯ ವಿಧಾನಸಭಾ ಪಟ್ಟಿಯಲ್ಲಿ ಹೆಸರು ಘೋಷಣೆಯಾಗದಿರುವುದಕ್ಕೆ ನೊಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದು ಬಿಜೆಪಿಗೆ ಬಹುದೊಡ್ಡ ಆಘಾತವನ್ನೇ ನೀಡಿದ್ದು, ಬಿಜೆಪಿ ಲೆಕ್ಕಾಚಾರ ಉಲ್ಟಾವೇ ಆಗೋಗಿದೆ. ಈ ಎಲ್ಲ ಬೆಳವಣಿಗೆಗಳ ನಂತರ ಅಮಿತ್ ಶಾ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಿಜೆಪಿಯು ಈ ಬಾರಿ ಬಹು ಅಂತರದಿಂದ ಜಯಶೀಲವಾಗಲಿದೆ. ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದರಿಂದ ಗೆಲುವು ನಮ್ಮದೇಯಾಗುತ್ತದೆ ಎಂದು ಕಾಂಗ್ರೆಸ್ ಭಾವಿಸಿದರೆ, ಏಕಾಂಗಿಯಾಗಿ ಜಯಗಳಿಸಲು ನಮಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಒಪ್ಪಿಕೊಂಡಂತಾಗುತ್ತದೆ. ಆದರೆ ಮುಖ್ಯವಾದ ವಿಚಾರ ಎಂದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆಯೇ ಹೊರತು, ನಮ್ಮ ಮತ ಬ್ಯಾಂಕ್ ಅಲ್ಲ ಮತ್ತು ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲ. ಬಿಜೆಪಿಯು ಅಖಂಡತೆಯ ಪಕ್ಷ. ಈ ಬಾರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಮರಳಿ ಪಡೆಯುವುದು ಖಂಡಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಪಟ್ಟಿಯಿಂದ ಕೆಲವು ನಾಯಕರನ್ನು ಕೈಬಿಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, “ಪಕ್ಷವು ಬಹಳಷ್ಟು ಅಂಶಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಅವರ ಮೇಲೆ ಯಾವುದೇ ಆಪಾದನೆಗಳಿಲ್ಲ ಮತ್ತು ನಮ್ಮ ಪಕ್ಷದ ಈ ನಾಯಕರು ಗೌರವಾನ್ವಿತರು. ನಾವು ಸಹ ಕರ್ನಾಟಕ ರಾಜ್ಯದ ನಾಯಕರೊಂದಿಗೆ ಈಗಾಗಲೇ ಪಟ್ಟಿಯಿಂದ ತೆಗೆದುಹಾಕಿದ ಅಭ್ಯರ್ಥಿಗಳ ಕುರಿತಾಗಿ ಚರ್ಚೆ ನಡೆಸಿದ್ದೇವೆ. ಆಗ ಅವರು ಯಾವ ಕಾರಣಕ್ಕಾಗಿ ಟಿಕೆಟ್ ನಿರಾಕರಿಸಲಾಗಿದೆ ಎಂಬುದನ್ನು ವಿವರಿಸಿರುವುದಾಗಿ ಹೇಳಿದರು. ಅಂದರೆ ನಮ್ಮ ಪಕ್ಷದಲ್ಲಿ ಹಿರಿಯ ನಾಯಕರೊಂದಿಗೆ ಹೊಸಬರನ್ನು ಸೇರ್ಪಡೆ ಮಾಡಬೇಕು, ಮುಂದಿನ ಪೀಳಿಗೆಯವರಿಗೆ ರಾಜಕೀಯ ವಲಯದಲ್ಲಿ ಮಹತ್ವ ನೀಡುವ ಉದ್ದೇಶದಿಂದ ಕೆಲವು ಹಿರಿಯ ನಾಯಕರನ್ನು ಕೈಬಿಡಲಾಗಿದೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ ಎಂದು ಹೇಳಿದರು.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ